ಭಾರತೀಯ ಚಿತ್ರರಂಗದಲ್ಲಿ ನಟಿ ಆಲಿಯಾ ಭಟ್ (Alia Bhatt) ದೊಡ್ಡ ಸಾಧನೆ ಮಾಡಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಕೂಡ ಅವರಿಗೆ ಟ್ರೋಲ್ ಕಾಟ ತಪ್ಪಿದ್ದಲ್ಲ. ಆಗಾಗ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಾರೆ. ಒಂದಷ್ಟು ವರ್ಷಗಳ ಹಿಂದೆ ಆಲಿಯಾ ಭಟ್ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂಬ ಕಾರಣಕ್ಕೆ ಜನರು ಕಟು ಟೀಕೆ ಮಾಡಿದ್ದರು. ನಂತರ ನೆಪೋಟಿಸಂ ಕಾರಣದಿಂದ ಟ್ರೋಲ್ (Troll) ಮಾಡಿದರು. ಈಗ ಒಂದೇ ಒಂದು ಹೇಳಿಕೆ ನೀಡಿ ಆಲಿಯಾ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra) ಬಿಡುಗಡೆಗೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಆಲಿಯಾ ಭಟ್ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬಾಲಿವುಡ್ ಮಂದಿಗೆ ಈಗ ಬಹಿಷ್ಕಾರದ ಭಯ ಕಾಡುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳ ಎದುರಿನಲ್ಲಿ ಹಿಂದಿ ಸಿನಿಮಾಗಳು ಸೋಲುತ್ತಿವೆ. ಅದರ ಜೊತೆಯಲ್ಲೇ ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರ ಸಿನಿಮಾಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. #BoycottBollywood ಎಂಬ ಟ್ರೆಂಡ್ ಜೋರಾಗಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಆಲಿಯಾ ಭಟ್ ಅವರು ಜನರನ್ನು ಕೆಣಕುವಂತಹ ಹೇಳಿಕೆ ನೀಡಿದ್ದಾರೆ.
‘ನಾನು ಏನು ಎಂಬುದನ್ನು ಪದೇಪದೇ ಕೂಗಿ ಹೇಳಲು ಸಾಧ್ಯವಿಲ್ಲ. ನಿಮಗೆ ನಾನು ಇಷ್ಟ ಎಲ್ಲ ಎಂದಾದರೆ ನನ್ನನ್ನು ನೋಡಬೇಡಿ’ ಎಂದು ಆಲಿಯಾ ಭಟ್ ಹೇಳಿದ್ದಾರೆ. ಈ ಮೊದಲು ಕರೀನಾ ಕಪೂರ್ ಖಾನ್ ಕೂಡ ಇದೇ ರೀತಿ ಹೇಳಿಕೆ ನೀಡಿ ಟ್ರೋಲ್ಗೆ ಒಳಗಾಗಿದ್ದರು. ಈಗ ಆಲಿಯಾ ಭಟ್ ಅವರನ್ನು ಜನರು ಕಮೆಂಟ್ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಎಷ್ಟು ದರ್ಪದಿಂದ ಆಲಿಯಾ ಭಟ್ ಈ ರೀತಿ ಹೇಳಿದ್ದಾರೆ ನೋಡಿ. ಅವರು ಹೇಳಿದನ್ನು ನಾವು ಸವಾಲು ಅಂತ ಸ್ವೀಕರಿಸೋಣ. ಬ್ರಹ್ಮಾಸ್ತ್ರ ಸಿನಿಮಾವನ್ನು ಬಹಿಷ್ಕರಿಸೋಣ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಬಹಿಷ್ಕಾರದ ಟ್ರೆಂಡ್ನಿಂದಾಗಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ತಲೆ ಹಾಳಾಗಿದೆ ಎನಿಸುತ್ತದೆ. ನಿಮ್ಮ ಆಯ್ಕೆಯಂತೆಯೇ ಆಗಲಿ ಆಲಿಯಾ’ ಎಂದು ವ್ಯಕ್ತಿಯೊಬ್ಬರು ವ್ಯಂಗ್ಯವಾಡಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿರುವಾಗ ಆಲಿಯಾ ಇಂಥ ಹೇಳಿಕೆ ನೀಡಬಾರದಿತ್ತು ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿಯಾಗಿ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಕಳಪೆ ಗ್ರಾಫಿಕ್ಸ್ ಕಾರಣದಿಂದ ಈ ಚಿತ್ರದ ಟ್ರೇಲರ್ ಕೂಡ ಟೀಕೆಗೆ ಒಳಗಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:42 am, Tue, 23 August 22