ಸಲ್ಮಾನ್ ಖಾನ್ ಮನೆಗೆ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಕೆ
Salman Khan: ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರು ಶಪಥ ತೊಟ್ಟಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ರ ಆಪ್ತ ಮಾಜಿ ಶಾಸಕ ಬಾಬಾ ಸಿದ್ಧಿಖಿಯನ್ನು ಬಿಷ್ಣೋಯಿ ಸಹಚರರು ಕೊಂದಿದ್ದಾಗಿದೆ. ಸಲ್ಮಾನ್ ಖಾನ್ ತಮ್ಮ ನಿವಾಸದ ಭದ್ರತೆ ಹೆಚ್ಚಿಸಿಕೊಂಡಿದ್ದು, ಗುಂಡು ನಿರೋಧಕ ಗಾಜುಗಳನ್ನು ಅಳವಡಿಸಿಕೊಂಡಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ಗೆ ಯಾಕೋ ಕೆಟ್ಟ ದಿನಗಳು ನಡೆಯುತ್ತಿರುವಂತಿದೆ. ಅವರ ಸಿನಿಮಾ ಒಂದು ಸೂಪರ್ ಹಿಟ್ ಆಗಿ ವರ್ಷಗಳೇ ಆಗಿವೆ. ಸತತವಾಗಿ ಸಿನಿಮಾಗಳು ಸೋಲುತ್ತಿವೆ. ಇದರ ನಡುವೆ ಭೂಗತ ಪಾತಕಿಗಳು ಅವರ ಬೆನ್ನು ಬಿದ್ದಿದ್ದಾರೆ. ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರು ಶಪಥ ತೊಟ್ಟಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ರ ಆಪ್ತ ಮಾಜಿ ಶಾಸಕ ಬಾಬಾ ಸಿದ್ಧಿಖಿಯನ್ನು ಬಿಷ್ಣೋಯಿ ಸಹಚರರು ಕೊಂದಿದ್ದಾಗಿದೆ.
ಸಲ್ಮಾನ್ ಖಾನ್ಗೆ ಪದೇ ಪದೇ ಜೀವ ಬೆದರಿಕೆ ಬರುತ್ತಲೇ ಇದೆ. ಬೆದರಿಕೆಗಳ ನಡುವೆಯೇ ಸಲ್ಮಾನ್ ಖಾನ್ ತಮ್ಮ ಸಿನಿಮಾ ಚಿತ್ರೀಕರಣ ಇನ್ನಿತರೆಗಳನ್ನು ಮುಂದುವರೆಸಿದ್ದಾರೆ. ಕೆಲ ತಿಂಗಳ ಹಿಂದೆ ಸಲ್ಮಾನ್ ಖಾನ್ ಅವರ ಗ್ಯಾಲೆಕ್ಸಿ ನಿವಾಸದ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಗ್ಯಾಲೆಕ್ಸಿ ಅಪಾರ್ಟ್ಮೆಂಟ್ನ ಗಾಜಿನ ಕಿಟಕಿಗಳ ಮೇಲೆ ಶೂಟ್ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದರು. ಮತ್ತೊಮ್ಮೆ ಇಂಥಹಾ ದಾಳಿಯ ಸಾಧ್ಯತೆ ಇರುವ ಕಾರಣ ಇದೀಗ ಸಲ್ಮಾನ್ ಖಾನ್ರ ನಿವಾಸಕ್ಕೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ.
ಸಲ್ಮಾನ್ ಖಾನ್ರ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ನ ಕಿಟಕಿಗಳಿಗೆ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ರಸ್ತೆಯ ಬದಿ ಇರುವ ಹಾಗೂ ಇತರೆ ಅಪಾರ್ಟ್ಮೆಂಟ್ಗಳಿಗೆ ಹೊರಗಿನಿಂದ ಕಾಣುವ ಕಿಟಿಕಿಗಳಿಗೆ ಈ ಗುಂಡು ನಿರೋಧಕ ಗಾಜುಗಳನ್ನು ಅಳವಡಿಸಲಾಗಿದೆ. ಇದು ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್ರ ಮನೆಯ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು
ಕಳೆದ ವರ್ಷವೇ ಸಲ್ಮಾನ್ ಖಾನ್ ತಮ್ಮ ಕಾರಿಗೆ ಸಹ ಕೆಲವು ಭದ್ರತಾ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಬುಲೆಟ್ ಪ್ರೂಫ್ ಕಾರನ್ನು ಸಲ್ಮಾನ್ ಖಾನ್ ಬಳಸುತ್ತಿದ್ದಾರೆ. ಜೊತೆಗೆ ತಮ್ಮ ಎಲ್ಲ ಕಾರುಗಳಿಗೂ ಬುಲೆಟ್ ಪ್ರೂಫ್ ಗಾಜುಗಳನ್ನು ಅಳವಡಿಸಿದ್ದಾರೆ. ಮುಂಬೈ ಪೊಲೀಸರಿಂದ ಪರವಾನಗಿ ಬಂದೂಕುಗಳನ್ನು ಸಹ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಸಹ ಸಲ್ಮಾನ್ ಖಾನ್ಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಿದೆ.
ಸಲ್ಮಾನ್ ಖಾನ್ ಪ್ರಸ್ತುತ ‘ಸಿಖಂಧರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾದ ನಿರ್ದೇಶನವನ್ನು ತಮಿಳಿನ ಮುರುಗದಾಸ್ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ. ಸಿನಿಮಾ ಮಾರ್ಚ್ ತಿಂಗಳಲ್ಲಿ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ