‘ನಮ್ಮ ದೇಶವನ್ನು ಕೆಟ್ಟದಾಗಿ ತೋರಿಸುವ ಸಿನಿಮಾಗಳನ್ನೇ ಆಸ್ಕರ್ ಆಯ್ಕೆ ಮಾಡುತ್ತದೆ’: ಕಂಗನಾ
ಬಾಲಿವುಡ್ನ ಹಲವರನ್ನು ಕಂಗನಾ ರಣಾವತ್ ವಿರೋಧಿಸುತ್ತಲೇ ಇರುತ್ತಾರೆ. ಈಗ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಆಯ್ಕೆ ಆಗುವ ಸಿನಿಮಾಗಳ ಬಗ್ಗೆ ಕಂಗನಾ ಅಪಸ್ವರ ಎತ್ತಿದ್ದಾರೆ. ಕಂಗನಾ ಪ್ರಕಾರ, ಆಸ್ಕರ್ಗೆ ಆಯ್ಕೆಯಾಗುವ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿರುತ್ತದೆ. ಅಂತಹ ಸಿನಿಮಾಗಳನ್ನೇ ಆಯ್ಕೆ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಂಗನಾ ರಣಾವತ್ ಇದ್ದಲ್ಲಿ ವಿವಾದಗಳು ಇದ್ದೇ ಇರುತ್ತವೆ. ಪ್ರತಿ ಬಾರಿ ಮಾಧ್ಯಮಗಳ ಎದುರು ಬಂದಾಗಲೂ ಅವರು ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಾರೆ. ಈಗ ಅವರು ಆಸ್ಕರ್ ಬಗ್ಗೆ ತಕರಾರು ತೆಗೆದಿದ್ದಾರೆ. ಭಾರತದಿಂದ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗುವ ಸಿನಿಮಾಗಳ ಆಯ್ಕೆ ಯಾವ ರೀತಿ ನಡೆಯುತ್ತದೆ ಎಂಬುದನ್ನು ಕಂಗನಾ ವಿವರಿಸಿದ್ದಾರೆ. ನಮ್ಮ ದೇಶವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಸಿನಿಮಾಗಳೇ ಆಸ್ಕರ್ಗೆ ಆಯ್ಕೆ ಆಗುತ್ತವೆ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ.
ಈ ವರ್ಷದ ಆಸ್ಕರ್ ಸ್ಪರ್ಧೆಗೆ ಆಮಿರ್ ಖಾನ್ ನಿರ್ಮಾಣದ, ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ಭಾರತದಿಂದ ಆಯ್ಕೆ ಆಗಿತ್ತು. ಈ ಸಿನಿಮಾದ ಬಗ್ಗೆಯೇ ಕಂಗನಾ ರಣಾವತ್ ಅವರು ತಕರಾರು ತೆಗೆದಿರುವುದು. ಈಗ ಕಂಗನಾ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 17ರಂದು ಈ ಚಿತ್ರ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ಅವರು ಆಸ್ಕರ್ ಕುರಿತು ವಿಚಾರ ಎತ್ತಿದ್ದಾರೆ.
‘ಸಾಮಾನ್ಯವಾಗಿ ಆಸ್ಕರ್ನವರಿಗೆ ಭಾರತದ ಬಗ್ಗೆ ಉದ್ದೇಶವೇ ಬೇರೆ. ಈಗಲೂ ಕೂಡ ಒಂದು ಸಿನಿಮಾಗೆ ಭಾರಿ ಮೆಚ್ಚುಗೆ ಸಿಗುತ್ತಿದೆ. ಅದರ ಬಗ್ಗೆ ನಾನು ಕೂಡ ಎಗ್ಸೈಟ್ ಆಗಿದ್ದೆ. ಭಾರತದಲ್ಲಿ ನಮಗೆ ಬೇಕೆನಿಸಿದ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗದಷ್ಟು ಧಾರ್ಮಿಕ ಅಸಹಿಷ್ಣತೆ ಇದೆ ಎಂದು ಆ ಸಿನಿಮಾದ ನಿರ್ದೇಶಕರು ಹೇಳಿದ್ದನ್ನು ನಾನು ಕೇಳಿದ್ದೇನೆ. ನಾನು ಈ ಸಿನಿಮಾವನ್ನು ಇನ್ನೂ ನೋಡಿಲ್ಲ. ಭಾರತವನ್ನು ಕೆಟ್ಟದಾಗಿ ತೋರಿಸುವ ಸಿನಿಮಾಗಳೇ ಆಸ್ಕರ್ಗೆ ಬೇಕು’ ಎಂದು ಕಂಗನಾ ಹೇಳಿದ್ದಾರೆ.
ಇದನ್ನೂ ಓದಿ: ಎಮರ್ಜೆನ್ಸಿ ಟ್ರೇಲರ್: ಸೋಲಿನ ಸುಳಿಗೆ ಸಿಲುಕಿದ್ದ ಕಂಗನಾಗೆ ಈಗ ಗೆಲುವಿನ ನಿರೀಕ್ಷೆ
‘ಆದರೆ ಎಮರ್ಜೆನ್ಸಿ ಸಿನಿಮಾ ಆ ರೀತಿ ಇಲ್ಲ. ಈಗ ಭಾರತ ಹೇಗಿದೆ ಎಂಬುದನ್ನು ನೋಡಲು ಪಾಶ್ಚಾತ್ಯ ದೇಶಗಳು ಸಿದ್ಧವಾಗಿವೆ. ನಾನು ಪ್ರಶಸ್ತಿಗಳ ಬಗ್ಗೆ ಚಿಂತಿಸಿಲ್ಲ. ಭಾರತದ ಮತ್ತು ಪಾಶ್ಚಾತ್ಯ ಪ್ರಶಸ್ತಿಗಳ ಬಗ್ಗೆಯೂ ನನಗೆ ಆಲೋಚನೆ ಇಲ್ಲ. ಸಿನಿಮಾವನ್ನು ಚೆನ್ನಾಗಿ ಮಾಡಿದ್ದೇವೆ. ಯಾವುದೇ ಅಂತಾರಾಷ್ಟ್ರೀಯ ಸಿನಿಮಾಗಳ ಗುಣಮಟ್ಟಕ್ಕೆ ಇದು ಸರಿಸಮನಾಗಿದೆ’ ಎಂದು ತಮ್ಮ ಸಿನಿಮಾವನ್ನು ಕಂಗನಾ ಅವರು ಹೊಗಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.