
ಬಾಲಿವುಡ್ನ (Bollywood) ಸ್ಪೈ ಸಿನಿಮಾಗಳದ್ದು ಒಂದು ಸಿದ್ಧ ಸೂತ್ರವಿದೆ. ಭರ್ಜರಿ ಆಕ್ಷನ್, ದೇಶಭಕ್ತಿ ತುಂಬಿದ ಕೆಲ ಸಂಭಾಷಣೆಗಳು, ಪಾಕಿಸ್ತಾನದ ವಿಲನ್ ವಿರುದ್ಧ ನಾಯಕನ ಹೋರಾಟ. ಆಕಾಶದಲ್ಲೊಂದು ಫೈಟ್ ಅಥವಾ ಸಮುದ್ರದಲ್ಲೊಂದು ಚೇಸ್, ಭಿನ್ನ ಭಿನ್ನವಾದ ಆಯುಧಗಳು. ಇವುಗಳ ಜೊತೆಗೆ ಬಿಕಿನಿ. ಹೌದು, ಗ್ಲಾಮರ್ ಇಲ್ಲದ ಬಾಲಿವುಡ್ ಸ್ಪೈ ಸಿನಿಮಾ ಇಲ್ಲ. ಅದರಲ್ಲೂ ಸ್ಪೈ ಸಿನಿಮಾಗಳಲ್ಲಿ ನಾಯಕಿಯರು ವಿನಾಕಾರಣ ಬಿಕಿನಿ ಧರಿಸುತ್ತಾರೆ. ಇದೀಗ ‘ವಾರ್ 2’ ಸಿನಿಮಾದಲ್ಲಿಯೂ ಕಿಯಾರಾ ಅಡ್ವಾಣಿ ಬಿಕಿನಿಯಲ್ಲಿ ತಮ್ಮ ಮೈಮಾಟ ಪ್ರದರ್ಶನಕ್ಕೆ ಇಟ್ಟಿದ್ದರು. ಆದರೆ ಸಿಬಿಎಫ್ಸಿ ಅದಕ್ಕೆ ಕತ್ತರಿ ಹಾಕಿದೆ.
‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ನಟಿಸಿದ್ದು, ಬಾಲಿವುಡ್ ಸ್ಪೈ ಸಿನಿಮಾದ ಸಿದ್ಧ ಸೂತ್ರದ ಎಲ್ಲ ಅಂಶಗಳು ಈ ಸಿನಿಮಾನಲ್ಲಿವೆ. ಭರ್ಜರಿ ಆಕ್ಷನ್, ದೇಶಪ್ರೇಮದ ಸಂಭಾಷಣೆ, ನಾಯಕರ ಫ್ಲೆಕ್ಸಿಬಲ್ ಡ್ಯಾನ್ಸು, ಬಿಕಿನಿ ಧರಿಸಿದ ನಾಯಕಿ. ಆದರೆ ಈಗ ಸಿಬಿಎಫ್ಸಿ ಬಿಕಿನಿ ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಸಿನಿಮಾದ ಗ್ಲಾಮರ್ಗೆ ತುಸು ಹೊಡೆತ ಬಿದ್ದಂತಾಗಿದೆ.
ಕಿಯಾರಾ ಅಡ್ವಾಣಿ ಬಿಕಿನಿ ಧರಿಸಿರುವ ಬರೋಬ್ಬರಿ 9 ಸೆಕೆಂಡ್ನ ದೃಶ್ಯಕ್ಕೆ ಸಿಬಿಎಫ್ಸಿ ಕತ್ತರಿ ಹಾಕಿದೆಯಂತೆ. ಕಿಯಾರಾ ಬಿಕಿನಿ ಧರಿಸಿ ಪಾಲ್ಗೊಂಡಿರುವ ಹಾಡಿನಲ್ಲಿ ಕೆಲ ಸಾಲುಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಅಶ್ಲೀಲ ಹೋಲಿಕೆಗಳನ್ನು ಮಾಡಿರುವ ಕಾರಣ ಸಿಬಿಎಫ್ಸಿ ಈ ದೃಶ್ಯಗಳಿಗೆ ಕತ್ತರಿ ಹಾಕಿದೆ. ಇದರ ಜೊತೆಗೆ ಸಿನಿಮಾನಲ್ಲಿ ಒಂದು ಅಶ್ಲೀಲ ಸಂಭಾಷಣೆಯನ್ನು ತೆಗೆಯಲಾಗಿದ್ದು ಆ ಪದದ ಪದಲಿಗೆ ಬೇರೆ ಪದವನ್ನು ಬಳಸಲಾಗಿದೆ. ಜೊತೆಗೆ ಪಾತ್ರವೊಂದು ಮಾಡುವ ಅಶ್ಲೀಲ ಸಂಜ್ಞೆಯ ದೃಶ್ಯಕ್ಕೂ ಕತ್ತರಿ ಹಾಕಲಾಗಿದೆ.
ಇದನ್ನೂ ಓದಿ:‘ವಾರ್ 2’ Vs ‘ಕೂಲಿ’: ಬುಕ್ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?
ಸಿನಿಮಾನಲ್ಲಿ ಗ್ಲಾಮರ್ ದೃಶ್ಯಗಳನ್ನು 50% ಕಡಿಮೆ ಮಾಡುವಂತೆ ಸಿಬಿಎಫ್ಸಿ ಸಿನಿಮಾ ತಂಡಕ್ಕೆ ಹೇಳಿದೆ. ಅಂದರೆ 9 ಸೆಕೆಂಡುಗಳ ಬಿಕಿನಿ ದೃಶ್ಯಕ್ಕೆ ಚಿತ್ರತಂಡ ಕತ್ತರಿ ಹಾಕುವಂತೆ ಸೂಚಿಸಲಾಗಿದೆ. ಕಿಯಾರಾ ನಟಿಸಿರುವ ‘ಅವಾನ್-ಜವಾನ್’ ಹಾಡಿನ ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಆದರೆ ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ಯಾವುದೆ ಬದಲಾವಣೆಗೆ ಸೂಚಿಸಿಲ್ಲ.
ಸೆನ್ಸಾರ್ ಮಂಡಳಿ ಸೂಚಿಸಿರುವ ಎಲ್ಲ ಬದಲಾವಣೆಗಳನ್ನು ಚಿತ್ರತಂಡ ಈಗಾಗಲೇ ಮಾಡಿದೆ. ಅದರ ಬಳಿಕ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದ್ದು, 16ಕ್ಕೂ ಹೆಚ್ಚು ವಯಸ್ಸಿನ ಮಕ್ಕಳು ಪೋಷಕರ ನಿಗಾವಣೆಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಸಿನಿಮಾದ ಒಟ್ಟು ಕಾಲಾವಧಿ 179 ನಿಮಿಷಗಳಿವೆ. ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ