‘ವಾರ್ 2’ Vs ‘ಕೂಲಿ’: ಬುಕ್ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?
ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರೆ ಪ್ರೇಕ್ಷಕರಿಗೆ ಗೊಂದಲ ಸಹಜ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳು ಆಗಸ್ಟ್ 14ರಂದು ತೆರೆಕಾಣುತ್ತಿವೆ. ಹಾಗಾಗಿ ಈ ವಾರ ಸಿನಿಪ್ರಿಯರಿಗೆ ಮನರಂಜನೆಯ ಹಬ್ಬ ಆಗಲಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೂ ಒಂದು ದಿನ ಮೊದಲು ಅಂದರೆ, ಆಗಸ್ಟ್ 14ರಂದು ಬಹುನಿರೀಕ್ಷಿತ ‘ವಾರ್ 2’ ಹಾಗೂ ‘ಕೂಲಿ’ (Coolie) ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಸಿನಿಮಾಗಳಲ್ಲಿ ಬಹುತಾರಾಗಣ ಇದೆ. ಹಾಗಾಗಿ ಅಭಿಮಾನಿಗಳಿಗೆ ಭರ್ಜರಿ ನಿರೀಕ್ಷೆ ಮೂಡಿದೆ. ವಿಶ್ವಾದ್ಯಂತ ಈ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ‘ಕೂಲಿ’ ಮತ್ತು ‘ವಾರ್ 2’ (War 2) ಇವರೆಡರಲ್ಲಿ ಮೊದಲು ಯಾವ ಚಿತ್ರವನ್ನು ನೋಡಬೇಕು ಎಂಬ ಗೊಂದಲಲ್ಲಿ ಪ್ರೇಕ್ಷಕರು ಇದ್ದಾರೆ. ‘ಬುಕ್ ಮೈ ಶೋ’ನಲ್ಲಿ (Book My Show) ಎರಡೂ ಸಿನಿಮಾಗಳು ಟ್ರೆಂಡ್ ಆಗುತ್ತಿವೆ.
ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಸಿನಿಮಾ ಎಂದರೆ ಕ್ರೇಜ್ ಜೋರಾಗಿಯೇ ಇರುತ್ತದೆ. ಬಿಡುಗಡೆಗೆ ಇನ್ನು ಕೇವಲ 3 ದಿನ ಬಾಕಿ ಇರುವಾಗ ಬುಕ್ ಮೈ ಶೋನಲ್ಲಿ ಈ ಸಿನಿಮಾಗೆ 7 ಲಕ್ಷದ 52 ಸಾವಿರ ಜನರು ಇಂಟರೆಸ್ಟ್ ತೋರಿಸಿದ್ದಾರೆ. ವಿದೇಶದಲ್ಲಿ ಕೂಡ ಭರ್ಜರಿ ಬುಕಿಂಗ್ ಆಗುತ್ತಿದೆ.
ಇನ್ನು, ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾದ ಕ್ರೇಜ್ ಕೂಡ ಜೋರಾಗಿದೆ. ಈ ಸಿನಿಮಾಗೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಬುಕ್ ಮೈ ಶೋನಲ್ಲಿ ಈ ಸಿನಿಮಾಗೆ 8 ಲಕ್ಷದ 79 ಸಾವಿರ ಜನರು ಇಂಟರೆಸ್ಟ್ ತೋರಿಸಿದ್ದಾರೆ.
ಹಾಡುಗಳು ಮತ್ತು ಟ್ರೇಲರ್ ಮೂಲಕ ‘ವಾರ್ 2’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಜೂನಿಯರ್ ಎನ್ಟಿಆರ್, ಹೃತಿಕ್ ರೋಷನ್ ಜೊತೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರು ಅಭಿನಯಿಸಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಇದು ಜೂನಿಯರ್ ಎನ್ಟಿಆರ್ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಎಂಬುದು ವಿಶೇಷ.
ಇದನ್ನೂ ಓದಿ: ‘ವಾರ್ 2’ ಹೊಸ ಹಾಡಿನಲ್ಲಿ ಧೂಳೆಬ್ಬಿಸಿದ ಜೂ. ಎನ್ಟಿಆರ್, ಹೃತಿಕ್ ರೋಷನ್
ಪಾತ್ರವರ್ಗದ ಕಾರಣದಿಂದಲೇ ‘ಕೂಲಿ’ ಸಿನಿಮಾ ಸದ್ದು ಮಾಡುತ್ತಿದೆ. ವಿವಿಧ ಭಾಷೆಯ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಜೊತೆ ಶ್ರುತಿ ಹಾಸನ್, ಉಪೇಂದ್ರ, ಸತ್ಯರಾಜ್, ಆಮಿರ್ ಖಾನ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಪೂಜಾ ಹೆಗ್ಡೆ ಅವರು ‘ಮೋನಿಕಾ’ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆ ಹಾಡಿನಿಂದಲೂ ಸಿನಿಮಾ ಮೇಲಿನ ಹೈಪ್ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








