ಸೆಕ್ಯೂರಿಟಿ ಒದ್ದು ಓಡಿಸ್ತಾರೆ: ಫ್ಯಾನ್ಸ್ ಮೇಲೆ ಗರಂ ಆದ ಜೂನಿಯರ್ ಎನ್ಟಿಆರ್
ಲಂಡನ್ನಲ್ಲಿ ಅಭಿಮಾನಿಗಳು ನಡೆದುಕೊಂಡ ರೀತಿಗೆ ನಟ ಜೂನಿಯರ್ ಎನ್ಟಿಆರ್ ಅವರು ಗರಂ ಆಗಿದ್ದಾರೆ. ಮಿತಿ ಮೀರಿ ನಡೆದುಕೊಂಡ ಅಭಿಮಾನಿಗಳ ಮೇಲೆ ಅವರು ಕೂಡಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಹೀಗೆ ಮಾಡಿದ್ದರಿಂದ ವಿದೇಶದಲ್ಲಿ ಮುಜುಗರ ಅನುಭವಿಸುವಂತಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (Jr NTR) ಅವರ ಯಾವಾಗಲೂ ಕೂಲ್ ಆಗಿ ಇರುತ್ತಾರೆ. ಆದರೆ ಅವರು ತಾಳ್ಮೆ ಕಳೆದುಕೊಳ್ಳುವಂತಹ ಘಟನೆ ಲಂಡನ್ನಲ್ಲಿ ನಡೆದಿದೆ. ಅಭಿಮಾನಿಗಳು ಅತಿ ಉತ್ಸಾಹದಲ್ಲಿ ಗದ್ದಲ ಮಾಡಿದಾಗ ಜೂನಿಯರ್ ಎನ್ಟಿಆರ್ ಕೋಪಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ರಾಮ್ ಚರಣ್ ಅವರ ಅಭಿಮಾನಿಗಳು ಕೂಡ ಲಂಡನ್ನಲ್ಲಿ ಮಿತಿ ಮೀರಿ ನಡೆದುಕೊಂಡಿದ್ದರು. ಈಗ ಜೂನಿಯರ್ ಎನ್ಟಿಆರ್ ಅವರ ಫ್ಯಾನ್ಸ್ (Jr NTR Fans) ಕೂಡ ಕಿರಿಕಿರಿ ಉಂಟುಮಾಡಿದ್ದಾರೆ. ಇಂಥ ಘಟನೆಗಳಿಂದ ವಿದೇಶದಲ್ಲಿ ಭಾರತದ ನಟರು ಮುಜುಗರಕ್ಕೆ ಒಳಗಾಗುವಂತಾಗಿದೆ.
ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅವರು ಲಂಡನ್ಗೆ ತೆರಳಿದ್ದಾರೆ. ಅಲ್ಲಿ ‘ಆರ್ಆರ್ಆರ್’ ಸಿನಿಮಾದ ವಿಶೇಷ ಪ್ರದರ್ಶನ ಮಾಡಲಾಗಿದೆ. ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ಪ್ರದರ್ಶನ ನಡೆದಿದೆ. ಈ ಶೋಗೆ ಆಗಮಿಸಿದ ಜೂನಿಯರ್ ಎನ್ಟಿಆರ್ ಅವರನ್ನು ನೋಡಿ ಅಭಿಮಾನಿಗಳು ಕಿರುಚಾಡಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಿದೆ.
ಜೂನಿಯರ್ ಎನ್ಟಿಆರ್ ಅವರು ನಡೆದು ಬರುವಾಗ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಇದರಿಂದಾಗಿ ಅಲ್ಲಿ ಗದ್ದಲ ಸೃಷ್ಟಿ ಆಯಿತು. ಇಂಥ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗುವ ಸಂಭವ ಕೂಡ ಇರುತ್ತದೆ. ಹಾಗಾಗಿ ಜೂನಿಯರ್ ಎನ್ಟಿಆರ್ ಅವರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಆದರೂ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅಭಿಮಾನಿಗಳು ಇರಲಿಲ್ಲ.
#JrNTR gets upset with fans during the RRR Live Concert at Royal Albert Hall.#RRR #RamCharan pic.twitter.com/I2YkF6O5lO
— Whynot Cinemas (@whynotcinemass_) May 11, 2025
ಅಭಿಮಾನಿಗಳ ವರ್ತನೆಯಿಂದ ಜೂನಿಯರ್ ಎನ್ಟಿಆರ್ ಅವರು ಕೋಪಗೊಂಡರು. ‘ನಾನು ನಿಮಗೆ ಸೆಲ್ಫಿ ನೀಡುತ್ತೇನೆ. ಆದರೆ ನೀವು ಕಾಯಬೇಕು. ನೀವು ಈ ರೀತಿ ನಡೆದುಕೊಂಡರೆ ಸೆಕ್ಯೂರಿಟಿಯವರು ನಿಮ್ಮನ್ನು ಒದ್ದು ಓಡಿಸುತ್ತಾರೆ’ ಎಂದು ಜೂನಿಯರ್ ಎನ್ಟಿಆರ್ ಹೇಳಿದರು. ಹಾಗಿದ್ದರೂ ಫ್ಯಾನ್ಸ್ ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ. ಅದರಿಂದ ಕೋಪಗೊಂಡ ಜೂನಿಯರ್ ಎನ್ಟಿಆರ್ ಅವರು ಅಲ್ಲಿಂದ ಹೊರಟುಹೋದರು.
ಇದನ್ನೂ ಓದಿ: ಜೂ ಎನ್ಟಿಆರ್ ಧರ್ಮದ ಬಗ್ಗೆ ಚರ್ಚೆ, ಮೊಹಮ್ಮದ್ ಶರೀಫ್ ಖಾನ್ ಯಾರು?
ರಾಮ್ ಚರಣ್ ಅವರು ಲಂಡನ್ನ ಮೇಡಂ ಟುಸಾಡ್ಸ್ ಮ್ಯೂಸಿಯಂಗೆ ತೆರಳಿದ್ದಾಗಲೂ ಇದೇ ರೀತಿ ಆಗಿತ್ತು. ರಾಮ್ ಚರಣ್ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳು ಜೋರಾಗಿ ಕಿರುಚಾಡಿದರು. ಇದರಿಂದ ಮೂಸಿಯಂ ಸಿಬ್ಬಂದಿಗೆ ಕಿರಿಕಿರಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








