‘ವಾರ್ 2’ ಹೊಸ ಹಾಡಿನಲ್ಲಿ ಧೂಳೆಬ್ಬಿಸಿದ ಜೂ. ಎನ್ಟಿಆರ್, ಹೃತಿಕ್ ರೋಷನ್
‘ವಾರ್ 2’ ಸಿನಿಮಾದ ‘ಜನಾಬ್-ಏ-ಆಲಿ’ ಹಾಡಿನ ಪ್ರೋಮೋ ಬಿಡುಗಡೆ ಆಗಿದೆ. ಇದು ಭರ್ಜರಿ ಡ್ಯಾನ್ಸ್ ನಂಬರ್. ಪರಸ್ಪರ ಪೈಪೋಟಿ ನೀಡುವ ರೀತಿಯಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಡ್ಯಾನ್ಸ್ ಮಾಡಿದ್ದಾರೆ. ಈಗ ಬರೀ ಪ್ರೋಮೋ ಬಂದಿದೆ. ಪೂರ್ತಿ ಹಾಡು ನೋಡಬೇಕು ಎಂದರೆ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರಬೇಕು.

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಅವರು ಎಂಥ ಅದ್ಭುತ ಡ್ಯಾನ್ಸರ್ ಎಂಬುದು ಎಲ್ಲರಿಗೂ ಗೊತ್ತು. ಅದೇ ರೀತಿ, ಜೂನಿಯರ್ ಎನ್ಟಿಆರ್ ಕೂಡ ಡ್ಯಾನ್ಸ್ ವಿಚಾರದಲ್ಲಿ ಯಾರಿಗೂ ಕಡಿಮೆ ಇಲ್ಲ. ಇವರಿಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿದರೆ ಅಭಿಮಾನಿಗಳ ಕಣ್ಣಿಗೆ ಹಬ್ಬವೇ ಸರಿ. ‘ವಾರ್ 2’ (War 2) ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಅವರು ತೆರೆ ಹಂಚಿಕೊಂಡಿದ್ದಾರೆ. ಅವರಿಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿರುವ ‘ಜನಾಬ್-ಏ-ಆಲಿ’ ಹಾಡಿನ ಪ್ರೋಮೋ ಬಿಡುಗಡೆ ಆಗಿದೆ. ಇದರಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ (Jr NTR) ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.
ಹಲವು ಕಾರಣಗಳಿಂದಾಗಿ ‘ವಾರ್ 2’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಮೂಲಕ ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಆಗಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ನೋಡಿದರೆ ಪ್ರತಿ ಫ್ರೇಮ್ನಲ್ಲೂ ಅದ್ದೂರಿತನ ಕಾಣಿಸುತ್ತಿದೆ. ‘ಜನಾಬ್-ಏ-ಆಲಿ’ ಹಾಡಿನ ತುಣುಕು ಕೂಡ ಸಖತ್ ರಿಚ್ ಆಗಿ ಮೂಡಿಬಂದಿದೆ.
ಅಂದಹಾಗೆ, ಈಗ ಬಿಡುಗಡೆ ಆಗಿರುವುದು ‘ಜನಾಬ್-ಏ-ಆಲಿ’ ಹಾಡಿನ ಪ್ರೋಮೋ ಮಾತ್ರ. ಪೂರ್ತಿ ಹಾಡು ನೋಡಬೇಕು ಎಂಬ ಬಯಕೆ ಅಭಿಮಾನಿಗಳಿಗೆ ಮೂಡಿದೆ. ಆದರೆ ಸದ್ಯಕ್ಕೆ ಯೂಟ್ಯೂಬ್ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿಲ್ಲ. ‘ಚಿತ್ರಮಂದಿರದಲ್ಲಿ ಮಾತ್ರ ಪೂರ್ತಿ ಹಾಡು’ ಎಂದು ಈ ಪ್ರೋಮೋದಲ್ಲಿ ತಿಳಿಸಲಾಗಿದೆ! ಹಾಡು ನೋಡಬೇಕು ಎಂಬ ಆಸೆ ಇರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರಲೇಬೇಕು.
ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಪ್ರೀತಮ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಜೊತೆ ಕಿಯಾರಾ ಅಡ್ವಾನಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅಂದಾಜು 400 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಆಗಸದಲ್ಲಿ ‘ವಾರ್ 2’; ಗಾಬರಿಯಾದ ಮೆಲ್ಬರ್ನ್ ಜನತೆ: ವಿಡಿಯೋ ವೈರಲ್
ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಆದ್ದರಿಂದ ಅವರ ಅಭಿಮಾನಿಗಳ ಪಾಲಿಗೆ ಇದು ಸ್ಪೆಷಲ್ ಸಿನಿಮಾ. ಈ ಮೊದಲು ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಡ್ಯಾನ್ಸ್ ಕಾಂಬಿನೇಷನ್ ಗಮನ ಸೆಳೆದಿತ್ತು. ಅದೇ ರೀತಿ ಈಗ ‘ಜನಾಬ್-ಏ-ಆಲಿ’ ಹಾಡಿನಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಅವರ ಕಾಂಬಿನೇಷನ್ ಸದ್ದು ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




