
ಬಾಲಿವುಡ್‌ನಲ್ಲಿ ಕೌಟುಂಬಿಕ ಹಿಂಸಾಚಾರವನ್ನು ಉಲ್ಲೇಖಿಸಿ ಗಂಡನಿಂದ ಬೇರ್ಪಟ್ಟ ಅನೇಕ ನಟಿಯರು ಇದ್ದಾರೆ. ಅವರು ತಮ್ಮ ಗಂಡಂದಿರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಈಗ, ಮತ್ತೊಬ್ಬ ಬಾಲಿವುಡ್ ನಟಿಯ ಹೆಸರು ಮುನ್ನೆಲೆಗೆ ಬಂದಿದೆ. ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಸೆಲಿನಾ ಜೇಟ್ಲಿ ತಮ್ಮ ಆಸ್ಟ್ರಿಯನ್ ಪತಿ ಪ್ರಜೆ ಪೀಟರ್ ಹಾಗ್ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿ ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ಹಾಗ್‌ಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ವಿಚಾರಣೆ ಡಿಸೆಂಬರ್ 12 ರಂದು ನಡೆಯಲಿದೆ. ಸೆಲಿನಾ ಅವರು ಉಪೇಂದ್ರ (Upendra) ನಟನೆಯ ‘ಶ್ರೀಮತಿ’ ಸಿನಿಮಾದಲ್ಲಿ ಅಭಿನಯಿಸಿದ್ದರು.
ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಮುಂಬೈ ನ್ಯಾಯಾಲಯದಲ್ಲಿ 50 ಕೋಟಿ ಪರಿಹಾರ ಮತ್ತು ಮಾಸಿಕ ನಿರ್ವಹಣೆಗಾಗಿ 10 ಲಕ್ಷ ರೂ. ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಪೀಟರ್ ಹಾಗ್ ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಸೆಲೀನಾ ಆರೋಪಿಸಿದ್ದಾರೆ. ಪೀಟರ್ ಹಾಗ್ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ ಮತ್ತು ಕೆಲಸ ಮಾಡದಂತೆ ತಡೆದಿದ್ದಾರೆ ಎಂದು ಸೆಲೀನಾ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ. ಪೀಟರ್ ಹಾಗ್ ತನ್ನನ್ನು ಸೇವಕಿ ಎಂದು ಕರೆದು ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನೋ ಎಂಟ್ರಿ” ಮತ್ತು “ಗೋಲ್ಮಾಲ್ ರಿಟರ್ನ್ಸ್” ನಂತಹ ಹಿಂದಿ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ನನಗೆ ತುಂಬಾ ಕಿರುಕುಳ ನೀಡಲಾಗಿದೆ. ಅಕ್ಟೋಬರ್ 11 ರಂದು ಮಧ್ಯರಾತ್ರಿ ಆಸ್ಟ್ರಿಯಾದಲ್ಲಿರುವ ನನ್ನ ಮನೆಯಿಂದ ಹೊರಡಬೇಕಾಯಿತು. ಈ ವೇಳೆ ಮೂವರು ಮಕ್ಕಳನ್ನು ಬಿಟ್ಟು ಭಾರತಕ್ಕೆ ಮರಳಬೇಕಾಯಿತು’ ಎಂದು ಹೇಳಿದ್ದಾರೆ.
‘ಮಕ್ಕಳನ್ನು ಭೇಟಿ ಮಾಡಲು ಅಥವಾ ಮಾತನಾಡಲು ಅವಕಾಶ ನೀಡಲಿಲ್ಲ. ಆಸ್ಟ್ರಿಯಾದಲ್ಲಿ ವಿಚ್ಛೇದನ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾನ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ದಂಪತಿಗಳು 2011 ರಲ್ಲಿ ವಿವಾಹವಾದರು.
ಇದನ್ನೂ ಓದಿ: ಕನ್ನಡ ಸಿನಿಮಾ ಟೀಕಿಸಲು ಬಂದ ಸಂದರ್ಶಕನಿಗೆ ಉಪೇಂದ್ರ ಖಡಕ್ ಉತ್ತರ
ಮುಂಬೈನ ಅಂಧೇರಿಯಲ್ಲಿರುವ ತಮ್ಮ ಮನೆಯ ಸ್ವಾಧೀನ ಮತ್ತು ಷೇರುಗಳಲ್ಲಿ ಹೇಗ್ ಹಸ್ತಕ್ಷೇಪ ಮಾಡಬಾರದು ಎಂದು ನಿರ್ದೇಶನಗಳನ್ನು ನೀಡುವಂತೆ ಸೆಲೀನಾ ಕೋರ್ಟ್ನಲ್ಲಿ ಕೋರಿದ್ದಾರೆ. ಮುಂಬೈ ಮತ್ತು ವಿಯೆನ್ನಾದಲ್ಲಿನ ಆಸ್ತಿಗಳನ್ನು ತನ್ನ ನಿಯಂತ್ರಣದಿಂದ ತೆಗೆದುಹಾಕಿದ ಕಾರಣ ಉಂಟಾದ ನಷ್ಟಕ್ಕೆ 1.26 ಕೋಟಿ ರೂ. ಮತ್ತು ನಿಧಿಯ ದುರುಪಯೋಗಕ್ಕಾಗಿ 32 ಲಕ್ಷ ರೂ. ಪರಿಹಾರವನ್ನು ಸಹ ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.