
ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ಕಾಕ್ರೋಚ್ ಸುಧಿ ಅವರಿಗೆ ಒಂದು ಇಮೇಜ್ ಇತ್ತು. ಸಿನಿಮಾಗಳಲ್ಲಿ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಬಿಗ್ ಬಾಸ್ (Bigg Boss Kannada Season 12) ಆಟದಲ್ಲಿ ಅವರ ಚಾರ್ಮ್ ಕಡಿಮೆ ಆಗಿದೆ. ಅನೇಕ ಸಂದರ್ಭಗಳಲ್ಲಿ ಅವರು ಹಿಂದೇಟು ಹಾಕುತ್ತಾರೆ. ತಾವೇ ಮುಂದಾಳತ್ವ ವಹಿಸುವ ಶಕ್ತಿ ಇದ್ದರೂ ಕೂಡ ಅದನ್ನು ಅವರು ಬಳಸಿಕೊಂಡಂತೆ ಕಾಣುತ್ತಿಲ್ಲ. ಅದೂ ಸಾಲದೆಂಬಂತೆ ಅವರು ಕಳ್ಳಾಟ ಆಡಿ ಸಿಕ್ಕಿ ಬಿದ್ದಿದ್ದಾರೆ. ಸ್ಪರ್ಧಿಗಳಿಗೆ ಮಾತ್ರವಲ್ಲದೇ ಸ್ವತಃ ಬಿಗ್ ಬಾಸ್ಗೂ ಚಳ್ಳೆ ಹಣ್ಣು ತಿನ್ನಿಸಲು ಕಾಕ್ರೋಚ್ ಸುಧಿ (Cockroach Sudhi) ಪ್ರಯತ್ನಿಸಿದರು. ಆದರೆ ಕ್ಯಾಮೆರಾ ಕಣ್ಣಲ್ಲಿ ಅವರ ಕಳ್ಳಾಟ ಸೆರೆ ಆಯಿತು.
ನವೆಂಬರ್ 10ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಈ ಮನೆಯಲ್ಲಿ ಹೆಚ್ಚು ವಿಷ ಕಾರುವ ವ್ಯಕ್ತಿ ಯಾರು ಎಂಬುದನ್ನು ಸೂಚಿಸಿ ಅವರಿಗೆ ಹಸಿ ಮೆಣಸಿನ ಕಾಯಿ ತಿನ್ನಬೇಕು ಎಂದು ಟಾಸ್ಕ್ ನೀಡಲಾಯಿತು. ಹಲವರು ಕಾಕ್ರೋಚ್ ಸುಧಿ ಹೆಸರನ್ನು ಹೇಳಿದರು. ಪ್ರತಿ ಬಾರಿ ಹೆಸರು ಬಂದಾಗ ಕಾಕ್ರೋಚ್ ಸುಧಿ ಅವರು ಒಂದೊಂದು ಹಸಿ ಮೆಣಸಿನ ಕಾಯಿ ತಿನ್ನಬೇಕಾಯಿತು.
ಹಸಿ ಮೆಣಸಿನಕಾಯಿ ತಿನ್ನುವುದು ಸುಲಭ ಅಲ್ಲ. ಅದರಲ್ಲೂ ಒಂದರ ಹಿಂದೊಂದು ಮೆಣಸಿನಕಾಯಿ ತಿನ್ನಬೇಕಾದ ಸಂದರ್ಭ ಬಂದಾಗ ಕಾಕ್ರೋಚ್ ಸುಧಿ ಅವರು ಕಳ್ಳಾಟದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಮೆಣಸಿನಕಾಯಿ ಒಳಗೆ ಇದ್ದ ಬೀಜಗಳನ್ನು ಯಾರಿಗೂ ಕಾಣದಂತೆ ನೆಲಕ್ಕೆ ಬೀಳಿಸಿದರು. ಆ ಮೂಲಕ ಖಾರದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದು ಅವರ ಪ್ಲ್ಯಾನ್ ಆಗಿತ್ತು.
ಆದರೆ ಅವರ ಈ ಕಳ್ಳಾಟ ಮುಂದುವರಿಯಲು ಬಿಗ್ ಬಾಸ್ ಬಿಡಲಿಲ್ಲ. ‘ನೀವು ಮಾಡಿದ ತಪ್ಪು ನಮಗೆ ಕಾಣಿಸಿದೆ’ ಎಂದು ಹೇಳುವ ಮೂಲಕ ಸರಿಯಾಗಿ ಮೆಣಸಿನಕಾಯಿ ತಿನ್ನುವಂತೆ ಸುಧಿಗೆ ಬಿಗ್ ಬಾಸ್ ಸೂಚಿಸಿದರು. ಹೊಸದಾಗಿ ಮೆಣಸಿನಕಾಯಿ ತಿನ್ನುವುದು ಅನಿವಾರ್ಯ ಆಯಿತು. ಈ ಟಾಸ್ಕ್ ವೇಳೆ ಅವರು ಹಲವು ಮೆಣಸಿನಕಾಯಿ ತಿಂದು ಸುಸ್ತಾದರು.
ಇದನ್ನೂ ಓದಿ: ಬಿಗ್ ಬಾಸ್ ಕರಿಬಸಪ್ಪ ಸದಾ ಖುಷಿ ಆಗಿರೋದು ಯಾಕೆ ಗೊತ್ತಾ?
ಅಶ್ವಿನಿ ಗೌಡ ಕೂಡ ಅತಿ ವಿಷಕಾರಿ ವ್ಯಕ್ತಿ ಎಂದು ಹಲವರು ಹೇಳಿದರು. ಅಲ್ಲದೇ ಜಾಹ್ನವಿ ಮತ್ತು ಅಶ್ವಿನಿ ಗೌಡ ನಡುವೆ ಇದ್ದ ಜಟಾಪಟಿ ಜಾಸ್ತಿ ಆಯಿತು. ಕೆಲವು ಸೀಕ್ರೆಟ್ಗಳು ಕೂಡ ಬಯಲಾದವು. ತಾವಿಬ್ಬರು ಜಗಳ ಮಾಡಿಕೊಂಡಂತೆ ನಟಿಸಬೇಕು ಎಂದು ಡ್ರೆಸಿಂಗ್ ರೂಮ್ನಲ್ಲಿ ಮೈಕ್ ಇಲ್ಲದೇ ಮಾತನಾಡಿಕೊಂಡು ಪ್ಲ್ಯಾನ್ ಮಾಡಿದ್ದನ್ನು ಕೂಡ ಅಶ್ವಿನಿ ಗೌಡ ಅವರು ಬಾಯಿ ಬಿಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.