ಇಕ್ಕಟ್ಟಿನಲ್ಲಿ ಶಿಲ್ಪಾ ಶೆಟ್ಟಿ, ಪತಿಯ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಡ

Shilpa Shetty-Raj Kundra: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮತ್ತು ವಿಚಾರಣೆ ಚಾಲ್ತಿಯಲ್ಲಿದೆ. ಇದೀಗ ಈ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ವಿರುದ್ಧ ಸಾಕ್ಷ್ಯ ನುಡಿಯುವಂತೆ ಶಿಲ್ಪಾ ಶೆಟ್ಟಿಗೆ ಸ್ವತಃ ನ್ಯಾಯಾಲಯದಿಂದಲೇ ಪರೋಕ್ಷ ಒತ್ತಡ ಬಂದಿದೆ.

ಇಕ್ಕಟ್ಟಿನಲ್ಲಿ ಶಿಲ್ಪಾ ಶೆಟ್ಟಿ, ಪತಿಯ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಡ
Shilpa Shetty Raj Kundra

Updated on: Oct 15, 2025 | 6:59 PM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಇಕ್ಕಟ್ಟಿಗೆ ಸಿಲುಕಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಪದೇ ಪದೇ ಆರ್ಥಿಕ ಅಪರಾಧಗಳ ಆರೋಪಿಗಳಾಗುತ್ತಿದ್ದಾರೆ. ಈ ಹಿಂದೆಯೂ ಕೆಲ ಬಾರಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲ ಆರೋಪಗಳು ಕೇಳಿ ಬಂದಿವೆ. ರಾಜ್ ಕುಂದ್ರಾ ಅಂತೂ ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ಜೈಲು ಪಾಲು ಸಹ ಆಗಿದ್ದಾರೆ. ಇದೀಗ ಮತ್ತೆ ಈ ಇಬ್ಬರ ಮೇಲೆ 60 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಪತಿಯ ವಿರುದ್ಧವೇ ಸಾಕ್ಷಿ ಹೇಳುವಂತೆ ಸ್ವತಃ ಹೈಕೋರ್ಟ್ ಪರೋಕ್ಷ ಒತ್ತಡ ಹೇರಿದೆ.

ಶಿಲ್ಪಾ ಶೆಟ್ಟಿ, ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವ್ಯವಹಾರದ ಮಾತುಕತೆಗಾಗಿ ತಾನು ಹಾಗೂ ತನ್ನ ಪುತ್ರ ವಿದೇಶಕ್ಕೆ ತೆರಳಬೇಕಾಗಿದ್ದು, ನಮ್ಮ ವಿರುದ್ಧ ಇರುವ ಲುಕೌಟ್ ನೊಟೀಸ್ ಅನ್ನು ರದ್ದು ಮಾಡಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕು ಎಂದು ಶಿಲ್ಪಾ ಹೇಳಿದ್ದರು. ಅಲ್ಲದೆ, ಪ್ರವಾಸದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ಅಲ್ಲದೆ ರಾಜ್ ಕುಂದ್ರಾ ತಮ್ಮ ಪುತ್ರಿ ಮತ್ತು ತಾಯಿಯೊಡನೆ ಮುಂಬೈನಲ್ಲಿಯೇ ಇರುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿದ್ದರು.

ವಿಶ್ವದ ಜನಪ್ರಿಯ ಯೂಟ್ಯೂಬರ್ ಆಗಿರುವ ಮಿಸ್ಟರ್ ಬೀಸ್ಟ್ ಕಾರ್ಯಕ್ರಮ ಒಂದಕ್ಕೆ ಶಿಲ್ಪಾ ಶೆಟ್ಟಿಯನ್ನು ಆಹ್ವಾನಿಸಿದ್ದು, ಶಿಲ್ಪಾ ಶೆಟ್ಟಿ ತಮ್ಮ ಪುತ್ರನೊಡನೆ ಕಾರ್ಯಕ್ರಮಕ್ಕೆ ತೆರಳಬೇಕಾಗಿದ್ದು ಇದೇ ತಿಂಗಳು 22 ರಿಂದ 27ರ ವರೆಗೆ ವಿದೇಶದಲ್ಲಿದ್ದು ಮರಳುವುದಾಗಿಯೂ ಹಾಗೂ ಈಗಾಗಲೇ ತಮಗೆ ಮಿಸ್ಟರ್ ಬೀಸ್ಟ್ ತಂಡದವರು ವಿಮಾನ ಟಿಕೆಟ್​​ಗಳನ್ನು ಕಳಿಸಿದ್ದಾರೆಂದು ಶಿಲ್ಪಾ ನ್ಯಾಯಾಲಯಕ್ಕೆ ವಕೀಲರ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ:ಶಿಲ್ಪಾ ಶೆಟ್ಟಿ ಮನೆಯಲ್ಲಿ ಕರ್ವಾ ಚೌತ್ ಸಂಭ್ರಮ ಹೇಗಿದೆ ನೋಡಿ..

ಅಲ್ಲದೆ, 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲವೆಂದು, ತಮಗೆ ಆ ಪ್ರಕರಣದೊಂದಿಗೆ ಸಂಬಂಧ ಸಹ ಇಲ್ಲವೆಂದು ಶಿಲ್ಪಾ ಶೆಟ್ಟಿ ಹೇಳಿದ್ದರು. ಹಾಗೂ 60 ಕೋಟಿ ಪ್ರಕರಣದಲ್ಲಿ ಆರೋಪ ಇರುವುದು ರಾಜ್ ಕುಂದ್ರಾ ಮೇಲೆ, ಶಿಲ್ಪಾ ನೇರ ಆರೋಪಿ ಅಲ್ಲ. ಅವರ ವಿರುದ್ಧ ಬೇರೆ ಯಾವುದೂ ಪ್ರಕರಣ ಇಲ್ಲವೆಂದು ಶಿಲ್ಪಾ ಪರ ವಕೀಲರು ವಾದಿಸಿದರು. ಶಿಲ್ಪಾ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಹಾಗಿದ್ದರೆ ಪತಿಯ ವಿರುದ್ಧ ನೀವೇಕೆ (ಶಿಲ್ಪಾ ಶೆಟ್ಟಿ) ಸಾಕ್ಷಿ ಹೇಳಬಾರದು ಎಂದು ಪ್ರಶ್ನೆ ಮಾಡಿದರು. ಶಿಲ್ಪಾ ಪರ ವಕೀಲರು, ನ್ಯಾಯಮೂರ್ತಿಗಳ ಈ ಹೇಳಿಕೆಯನ್ನು ಖಂಡಿಸಿದರು.

ಶಿಲ್ಪಾ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಶಿಲ್ಪಾ ಶೆಟ್ಟಿಯ ಕುಟುಂಬದ ಹಿನ್ನೆಲೆ ಪರಿಶೀಲಿಸುವಂತೆ ತಿಳಿಸಿದ್ದು, ಪೊಲೀಸ್ ಇಲಾಖೆಯು ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆ ಅಕ್ಟೋಬರ್ 16ಕ್ಕೆ ಮುಂದೂಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Wed, 15 October 25