ಬಿಡುಗಡೆಗೆ ಮುಂಚೆಯೇ ತೀವ್ರ ಟೀಕೆಗೆ ಗುರಿಯಾದ ಜಾನ್ಹವಿ ಕಪೂರ್ ಸಿನಿಮಾ
Param Sundari: ಜಾನ್ಹವಿ ಕಪೂರ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ‘ಪರಮ್ ಸುಂದರಿ’ ಸಿನಿಮಾ ಇನ್ನೆರಡು ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾದ ಬಗ್ಗೆ ಭರಪೂರ ಟೀಕೆಗಳು ವ್ಯಕ್ತವಾಗಿವೆ. ಈ ಟೀಕೆಗಳಿಗೆ ಕಾರಣವೇನು? ಟೀಕೆಗಳ ಬಗ್ಗೆ ಜಾನ್ಹವಿ ಕಪೂರ್ ಪ್ರತಿಕ್ರಿಯೆ ಏನು? ಇಲ್ಲಿದೆ ಮಾಹಿತಿ...

ಬಾಲಿವುಡ್ (Bollywood) ಸಿನಿಮಾಗಳು ಮೊದಲಿನಿಂದಲೂ ದಕ್ಷಿಣ ಭಾರತದವರನ್ನು ತಮಾಷೆಯಾಗಿ, ವ್ಯಂಗ್ಯವಾಗಿಯೇ ತೋರಿಸಿವೆ. ದಕ್ಷಿಣ ಭಾರತದ ಭಾಷೆ, ಹಿಂದಿ ಮಾತನಾಡುವ ರೀತಿ, ಉಡುಗೆ ಇನ್ನಿತರೆಗಳನ್ನು ವ್ಯಂಗ್ಯವಾಗಿ ತೋರಿಸುತ್ತಲೇ ಬಂದಿವೆ. ‘ಪಡೋಸನ್’ ಸಿನಿಮಾದಿಂದ ಹಿಡಿದು ಕೆಲ ವರ್ಷಗಳ ಹಿಂದೆ ಬಂದಿದ್ದ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾ ವರೆಗೆ ದಕ್ಷಿಣದವರನ್ನು ಒಂದೇ ಕೋನದಲ್ಲಿ ನೋಡುವ ಪ್ರಯತ್ನವನ್ನು ಬಾಲಿವುಡ್ ಮಾಡಿದೆ. ಇನ್ನೂ ಬಿಡುಗಡೆ ಆಗದ ‘ಪರಮ ಸುಂದರಿ’ ಸಿನಿಮಾ ಸಹ ಇದೇ ರೀತಿಯಾದ ಸಿನಿಮಾ ಆಗಿದ್ದು, ಇದೀಗ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ಟೀಕೆಗಳು ವ್ಯಕ್ತವಾಗಿವೆ.
‘ಪರಮ ಸುಂದರಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಮಲಯಾಳಿ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಉತ್ತರ ಭಾರತದ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ನಡುವೆ ಪ್ರೀತಿಯಾಗಿ, ಮದುವೆ ಆಗುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾ ಇನ್ನು ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಆದರೆ ಸಿನಿಮಾಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಮೊದಲಿಗೆ ಸಿನಿಮಾದ ನಾಯಕಿ ಜಾನ್ಹವಿ ಕಪೂರ್ ಅವರ ಆಖ್ಸೆಂಟ್ ಬಗ್ಗೆ ಟೀಕೆ ವ್ಯಕ್ತವಾಗಿದೆ. ಮಲಯಾಳಿ ಯುವತಿಯ ಪಾತ್ರದಲ್ಲಿ ನಟಿಸಿರುವ ಜಾನ್ಹವಿ ಕಪೂರ್, ತುಸುವೂ ಸಹ ಮಲಯಾಳಿ ರೀತಿ ಕಾಣುತ್ತಿಲ್ಲವೆಂದು ಹಾಗೂ ಜಾನ್ಹವಿಯ ಮಾತನಾಡುವ ವಿಧಾನವಂತೂ ತುಸುವೂ ಸಹ ಮಲಯಾಳಿಯನ್ನು ಹೋಲುವುದಿಲ್ಲ ಎಂದು ಮಲಯಾಳಿಗರೇ ಟೀಕೆ ಮಾಡಿದ್ದಾರೆ. ಒಂದು ಪಾತ್ರದಲ್ಲಿ ನಟಿಸುವಾಗ ತುಸುವಾದರೂ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳಬೇಕು ಆದರೆ ಜಾನ್ಹವಿ ಆ ರೀತಿಯ ಯಾವುದೇ ತಯಾರಿ ಮಾಡಿಲ್ಲವೆಂಬುದು ತಿಳಿಯುತ್ತಿದೆ ಎಂದು ಟೀಕೆ ಮಾಡಲಾಗಿದೆ.
ಇದನ್ನೂ ಓದಿ:‘ಪರಮ ಸುಂದರಿ’ ಜಾನ್ಹವಿ ಕಪೂರ್ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರಾ
ಇನ್ನು ‘ಪರಮ ಸುಂದರಿ’ ಸಿನಿಮಾವನ್ನು ಕೆಲವರು ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ನಟನೆಯ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಇದು ಚಿತ್ರತಂಡದ ಅಸಹನೆಗೆ ಕಾರಣವಾಗಿದೆ. ಪ್ರಚಾರಕ್ಕಾಗಿ ಹೋದಲ್ಲೆಲ್ಲ ನಮ್ಮ ಸಿನಿಮಾ ‘ಚೆನ್ನೈ ಎಕ್ಸ್ಪ್ರೆಸ್’ ರೀತಿ ಇಲ್ಲ. ನಮ್ಮ ಸಿನಿಮಾ ಬೇರೆ. ‘ಚೆನ್ನೈ ಎಕ್ಸ್ಪ್ರೆಸ್’ ಕಲ್ಟ್ ಸಿನಿಮಾ ಆಗಿದೆ. ಆ ಸಿನಿಮಾಕ್ಕೆ ನಮ್ಮ ಸಿನಿಮಾ ಹೋಲಿಸಬೇಡಿ. ಆ ಸಿನಿಮಾದ ರೀತಿಯ ನಿರೀಕ್ಷೆಗಳನ್ನು ಇರಿಸಿಕೊಂಡು ನಮ್ಮ ಸಿನಿಮಾಕ್ಕೆ ಬರಬೇಡಿ’ ಎಂದು ಸಹ ಮನವಿ ಮಾಡುತ್ತಿದ್ದಾರೆ.
ಇನ್ನು ತಮ್ಮ ಆಕ್ಸೆಂಟ್ ವಿಚಾರಕ್ಕೆ ಎದುರಾಗಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಜಾನ್ಹವಿ ಕಪೂರ್, ‘ನಾನು ಹಿಂದಿ ಭಾಷಿಕಳು ಹಾಗಿದ್ದಮೇಲೆ ನನಗೆ ಮಲಯಾಳಿ ಉಚ್ಛಾರಣಾ ರೀತಿ ಹೇಗೆ ತಾನೆ ಬರಲು ಸಾಧ್ಯ?’ ಎಂದು ಪ್ರಶ್ನೆ ಮಾಡಿದ್ದಾರೆ. ತಮಿಳು ಮಾತೃಭಾಷೆಯಾಗಿರುವ ಜಾನ್ಹವಿಯ ಈ ಉತ್ತರದಿಂದಾಗಿ ಇನ್ನಷ್ಟು ಟೀಕೆಗಳು ವ್ಯಕ್ತವಾಗಿವೆ. ದಕ್ಷಿಣ ಭಾರತದವರೇ ಆಗಿದ್ದರೂ ಇಂಗ್ಲೀಷ್ ಪ್ರಧಾನ ಭಾಷೆಯಾಗಿದ್ದ ದೀಪಿಕಾ ಚೆನ್ನೈ ಎಕ್ಸ್ಪ್ರೆಸ್ನಲ್ಲಿ ತಮಿಳು ಆಕ್ಸೆಂಟ್ನಲ್ಲಿ ಹಿಂದಿ ಮಾತನಾಡಿರುವ ರೀತಿಯನ್ನು ಜಾನ್ಹವಿಗೆ ಉದಾಹರಣೆಯಾಗಿ ನೀಡಿ ಟೀಕೆ ಮಾಡಿದ್ದಾರೆ. ‘ಪರಮ ಸುಂದರಿ’ ಸಿನಿಮಾ ಆಗಸ್ಟ್ 29ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




