ದಕ್ಷಿಣ ಭಾರತದ ಚಿತ್ರಗಳು ದೊಡ್ಡ ಬಜೆಟ್ನಲ್ಲಿ ಆಕ್ಷನ್ ಚಿತ್ರಗಳನ್ನು ತಯಾರಿಸಿ ವಿಶ್ವದ ಗಮನ ಸೆಳೆಯುತ್ತಿರುವಂತೆಯೇ ಬಾಲಿವುಡ್ ಕೂಡ ನಿಧಾನವಾಗಿ ಈ ಮಾದರಿಗೆ ಹೊರಳಿಕೊಳ್ಳುತ್ತಿದೆ. ಈಗಾಗಲೇ ಹಲವು ಬಿಗ್ ಬಜೆಟ್ ಚಿತ್ರಗಳು ಅನೌನ್ಸ್ ಆಗಿದ್ದು, ಕೆಲಸಗಳು ನಡೆಯುತ್ತಿವೆ. ಆದರೆ ಮಾಸ್ ಚಿತ್ರಗಳ ವಿಚಾರದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ವಿಶ್ವ ಮಟ್ಟದಲ್ಲಿ ಸಿಗುತ್ತಿರುವ ಜನಪ್ರಿಯತೆ ಬಾಲಿವುಡ್ ಚಿತ್ರಗಳಿಗೆ ಸಿಗುತ್ತಿಲ್ಲವೆಂದೇ ಹೇಳಬೇಕು. ಇದರ ನಡುವೆಯೇ ಹೊಸ ಹೊಸ ಪ್ರಯತ್ನಗಳಿಗೆ ಬಾಲಿವುಡ್ ಚಿತ್ರರಂಗ ಮುಂದಾಗಿದೆ. ಈ ಪಟ್ಟಿಯಲ್ಲಿ ‘ಫೈಟರ್’ (Fighter) ಚಿತ್ರ ಮೊದಲಿನಿಂದಲೂ ಸುದ್ದಿಯಾಗುತ್ತಿದೆ. ಹೃತಿಕ್ ರೋಶನ್ (Hrithik Roshan) ಈ ಚಿತ್ರದಲ್ಲಿ ನಾಯಕರಾಗಿ ಬಣ್ಣಹಚ್ಚುತ್ತಿದ್ದಾರೆ. ಮೊದಲ ಬಾರಿಗೆ ಹೃತಿಕ್ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗ ಹಿಂದೆಂದೂ ಕಂಡಿರದ ರೀತಿಯಲ್ಲಿ ‘ಫೈಟರ್’ ಮೂಡಿಬರಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಹೀಗಾಗಿ ಈ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದಕ್ಕೆ ಮತ್ತಷ್ಟು ಕಾಯುವುದು ಅನಿವಾರ್ಯ. ಕಾರಣ, ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿದೆ!
‘ಫೈಟರ್’ ಚಿತ್ರದಲ್ಲಿ ಭಾರತದ ಚಿತ್ರಗಳಲ್ಲೇ ಮೊದಲ ಬಾರಿಗೆ ವೈಮಾನಿಕ ಸಾಹಸ ದೃಶ್ಯಗಳಿರಲಿವೆ ಎಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ಹೇಳಿದ್ದರು. ದೀಪಿಕಾ ಕೂಡ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಸೇನೆ, ದೇಶಭಕ್ತಿಯ ಬಗ್ಗೆ ಈ ಚಿತ್ರವಿರಲಿದೆ ಎಂದೂ ಹೇಳಲಾಗಿದೆ. ಈ ಎಲ್ಲಾ ಕಾರಣದಿಂದ ‘ಫೈಟರ್’ ಬಗ್ಗೆ ಅಪಾರ ನಿರೀಕ್ಷೆಗಳಿವೆ. ದೊಡ್ಡ ಬಜೆಟ್ನಲ್ಲಿ ಚಿತ್ರ ತಯಾರಾಗುತ್ತಿರುವುದರಿಂದ ಕೆಲಸಗಳೂ ನಿಧಾನವಾಗಿ ಸಾಗತ್ತಿವೆ. ಈ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿದೆ ಎನ್ನಲಾಗಿದೆ.
2023ರ ಸೆಪ್ಟೆಂಬರ್ನಲ್ಲಿ ‘ಫೈಟರ್’ ತೆರೆಗೆ:
ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿರುವ ಬಗ್ಗೆ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಸೇರಿದಂತೆ ಚಿತ್ರತಂಡ ಹೇಳಿಕೊಂಡಿದೆ. ಹೃತಿಕ್ ಟ್ವೀಟ್ ಮಾಡಿ, 2023ರ ಸೆಪ್ಟೆಂಬರ್ 28ರಂದು ಚಿತ್ರ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ. ಈ ಮೊದಲು 2023ರ ಜನವರಿ 26ರಂದು ‘ಫೈಟರ್’ ರಿಲೀಸ್ ಆಗಲಿದೆ ಎಂದು ಘೋಷಿಸಲಾಗಿತ್ತು.
ಹೃತಿಕ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
SEPTEMBER
28th
…
2023.#Fighter pic.twitter.com/dHlnmm5xEw— Hrithik Roshan (@iHrithik) March 10, 2022
ಶಾರುಖ್ಗೆ ದಾರಿಬಿಟ್ಟುಕೊಟ್ಟ ಹೃತಿಕ್:
‘ಫೈಟರ್’ ಚಿತ್ರದ ಕೆಲಸಗಳು ನಿಧಾನವಾಗುತ್ತಿರುವುದು ರಿಲೀಸ್ ಮುಂದೂಡಲು ಒಂದು ಕಾರಣ. ಅಸಲಿ ಕಾರಣ ಬೇರೆಯದೇ ಇದೆ ಎನ್ನುತ್ತಿದ್ದಾರೆ ಬಾಲಿವುಡ್ ವಿಶ್ಲೇಷಕರು. ಇತ್ತೀಚೆಗಷ್ಟೇ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿತ್ತು. 2023ರ ಜನವರಿ 25ರಂದು ‘ಪಠಾಣ್’ ತೆರೆಗೆ ಬರುತ್ತಿದೆ. ಎರಡೂ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಿದ್ಧಾರ್ಥ್ ಆನಂದ್. ಎರಡಕ್ಕೂ ದೀಪಿಕಾ ಪಡುಕೋಣೆ ನಾಯಕಿ. ಹಲವು ವರ್ಷಗಳ ನಂತರ ಶಾರುಖ್ ಚಿತ್ರ ತೆರೆಗೆ ಬರಲಿದ್ದು, ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ.
ಇಷ್ಟೇ ಅಲ್ಲದೇ, ಎರಡೂ ಚಿತ್ರಗಳು ಆಕ್ಷನ್ ದೃಶ್ಯಗಳಾಗಿದ್ದು, ದೇಶಪ್ರೇಮವನ್ನೇ ಜೀವಾಳವಾಗಿಸಿಕೊಂಡಿವೆ. ಹೀಗಿರುವಾಗ ಎರಡೂ ಚಿತ್ರ ಒಂದೇ ದಿನ ಬಿಡುಗಡೆಯಾದರೆ ಬಾಕ್ಸಾಫೀಸ್ನಲ್ಲಿ ದೊಡ್ಡ ಕ್ಲ್ಯಾಶ್ ಆಗಲಿದೆ. ಇದರಿಂದ ‘ಫೈಟರ್’ ರಿಲೀಸ್ ಮುಂದೂಡಲು ಚಿತ್ರತಂಡ ಮನಸ್ಸು ಮಾಡಿದೆ ಎನ್ನಲಾಗಿದೆ. ಜತೆಗೆ ಚಿತ್ರದ ನಿರ್ದೇಶಕರು ಒಬ್ಬರೇ ಆಗಿರುವುದರಿಂದ ಒಂದೇ ಸಮಯಕ್ಕೆ ಎರಡೂ ಚಿತ್ರವನ್ನು ಮುಗಿಸುವುದು ಬಹಳ ಕಷ್ಟ. ‘ಫೈಟರ್’ ಚಿತ್ರೀಕರಣಕ್ಕೆ ಹೆಚ್ಚು ಸಮಯವೂ ಬೇಕಾಗಲಿದೆ. ಈ ಕಾರಣಗಳಿಂದಲೂ ರಿಲೀಸ್ ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
‘ಫೈಟರ್’ನಲ್ಲಿ ಅನಿಲ್ ಕಪೂರ್ ಕೂಡ ಬಣ್ಣಹಚ್ಚುತ್ತಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಹಿಂದೆ ‘ಬ್ಯಾಂಗ್ ಬ್ಯಾಂಗ್’ ಹಾಗೂ ‘ವಾರ್’ ಚಿತ್ರಗಳನ್ನು ನಿರ್ದೇಶಿಸಿದವರು. ಎರಡೂ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಗೆದ್ದಿದ್ದವು. ಈ ಕಾರಣಗಳಿಂದ ‘ಪಠಾಣ್’ ಹಾಗೂ ‘ಫೈಟರ್’ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಶಾರುಖ್ ಹಾಗೂ ಹೃತಿಕ್ ಕೂಡ ದೊಡ್ಡದೊಂದು ಗೆಲುವಿಗಾಗಿ ಕಾದಿದ್ದಾರೆ. ಈ ಚಿತ್ರಗಳು ಅಂತಹ ಗೆಲುವು ನೀಡಬಲ್ಲದು ಎಂಬ ವಿಶ್ವಾಸದಲ್ಲಿ ಈ ತಾರೆಯರಿದ್ದಾರೆ. ಒಟ್ಟಿನಲ್ಲಿ ನಿರೀಕ್ಷೆ ಮೂಡಿಸಿರುವ ಎರಡು ಬಾಲಿವುಡ್ ಚಿತ್ರಗಳು 2023ರಲ್ಲಿ ತೆರೆಕಾಣಲಿವೆ.
ಇದನ್ನೂ ಓದಿ:
Ex ಬಗ್ಗೆ ಮಾತು ಬೇಡ, Y ಬಗ್ಗೆ ಕೇಳಿ; ರಶ್ಮಿಕಾ ಯೂಟ್ಯೂಬ್ ಚಾನೆಲ್ ಶುರು; ಒಂದೇ ವಿಡಿಯೋಗೆ ಮುಗಿಬಿದ್ದ ಫ್ಯಾನ್ಸ್
ಕೊಂಬು ಇರುವ ಕುದುರೆ ಏರಿ ಬಂದ ಉಪೇಂದ್ರ; ನಿರ್ದೇಶನದ ಹೊಸ ಚಿತ್ರದಲ್ಲಿ ಹೇಗಿದೆ ನೋಡಿ ಉಪ್ಪಿ ಫಸ್ಟ್ ಲುಕ್