ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ; ಆ ಒಂದು ದೃಶ್ಯ ತೋರಿಸದಿರಲು ಕೋರ್ಟ್ ಸೂಚನೆ
ಮಾರ್ಚ್ 4ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ಅವರು ಸಿನಿಮಾ ಬಗ್ಗೆ ಧ್ವನಿ ಎತ್ತಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಆರಂಭದಿಂದಲೂ ಸಾಕಷ್ಟು ವಿವಾದಗಳ ಮೂಲಕ ಸುದ್ದಿ ಆಗುತ್ತಿರುವ ಸಿನಿಮಾ. 1990ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಕೊಲೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ಈಗ ಕೋರ್ಟ್ನಿಂದ ನಿರ್ಬಂಧ ಎದುರಾಗಿದೆ. ಭಾರತೀಯ ವಾಯುಪಡೆಯ ಅಧಿಕಾರಿ (IAF Officer) ರವಿ ಖನ್ನಾ (Ravi Khanna) ಅವರ ದೃಶ್ಯಗಳನ್ನು ತೋರಿಸದಂತೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತಂಡಕ್ಕೆ ಜಮ್ಮು ಕೋರ್ಟ್ ನಿರ್ದೇಶನ ನೀಡಿದೆ.
ಮಾರ್ಚ್ 4ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ‘ಸಿನಿಮಾದಲ್ಲಿ ನನ್ನ ಪತಿಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಲಾಗಿದೆ. ರವಿ ಖನ್ನಾ ಅವರನ್ನು ತಪ್ಪಾದ ರೀತಿಯಲ್ಲಿ ತೋರಿಸಲಾಗಿದೆ’ ಎಂದು ದೂರಿದ್ದರು. ಸಿನಿಮಾ ಮುಗಿದ ಬಳಿಕ ವೇದಿಕೆ ಮೇಲೆ ಈ ವಿಚಾರ ಹೇಳಿಕೊಂಡಿದ್ದರು. ಆದರೆ, ಯಾರೊಬ್ಬರೂ ಆ ಬಗ್ಗೆ ಲಕ್ಷ್ಯ ವಹಿಸಲಿಲ್ಲ. ಈ ಕಾರಣಕ್ಕೆ ಅವರು ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದಾರೆ. ರವಿ ಖನ್ನಾ ಸೇರಿ ಐಎಎಫ್ನ ನಾಲ್ಕು ಸಿಬ್ಬಂದಿ 1990ರ ಜನವರಿ 25ರಂದು ಹುತಾತ್ಮರಾದರು. ಈ ಸಂಚಿನ ಹಿಂದೆ ಜಮ್ಮು ಕಾಶ್ಮೀರ್ ಲಿಬರೇಷನ್ ಫ್ರಂಟ್ನ ಮುಖ್ಯಸ್ಥ ಯಾಸಿನ್ ಮಲಿಕ್ ಕೈವಾಡ ಇದೆ ಎನ್ನಲಾಗಿದೆ.
‘ದೂರಿನಲ್ಲಿ ಹೇಳಿರುವುದನ್ನು ಗಮನಿಸಿದ್ದೇವೆ. ರವಿ ಖನ್ನಾ ಅವರಿಗೆ ಸಂಬಂಧಿಸಿದ ದೃಶ್ಯಗಳನ್ನು ಪ್ರದರ್ಶನ ಮಾಡುವಂತಿಲ್ಲ’ ಎಂದು ಜಮ್ಮುವಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದೀಪಕ್ ಸೇಥಿ ಆದೇಶದಲ್ಲಿ ತಿಳಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದಲ್ಲಿ, ಅನುಪಮ್ ಖೇರ್ ಹಾಗೂ ಮೊದಲಾದವರು ನಟಿಸಿದ್ದಾರೆ.
ಕಪಿಲ್ ಶರ್ಮಾ ಶೋ ವಿಚಾರದಲ್ಲಿ ಚರ್ಚೆ ಆಗಿದ್ದ ಸಿನಿಮಾ
ಇತ್ತೀಚೆಗೆ ಕಪಿಲ್ ಶರ್ಮಾ ಶೋ ಬಗ್ಗೆ ನಿರ್ದೇಶಕ ವಿವೇಕ್ ಗಂಭೀರ ಆರೋಪ ಮಾಡಿದ್ದರು. ‘ನಮ್ಮ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಯಲು ಕಪಿಲ್ ಶರ್ಮಾ ನಿರಾಕರಿಸಿದರು’ ಎಂದು ವಿವೇಕ್ ಹೇಳಿದ್ದರು. ಇದಲ್ಲದೆ ಮತ್ತೊಂದು ಟ್ವೀಟ್ ಮಾಡಿದ್ದ ಅವರು, ‘ಕಪಿಲ್ ಶರ್ಮಾ ಶೋಗೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಾನು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಇದು ಅವರು ಮತ್ತು ಅವರ ನಿರ್ಮಾಣ ತಂಡದ ಆಯ್ಕೆ. ಅಮಿತಾಭ್ ಬಚ್ಚನ್ ಅವರು ಒಮ್ಮೆ ಗಾಂಧೀಜಿ ಅವರು ಹೇಳಿದ್ದ ವಾಕ್ಯವನ್ನು ಹೇಳಿದ್ದರು. ಅವರು ರಾಜರು, ನಾವು ಬಡವರು’ ಎಂದು ಬರೆದಿದ್ದರು ವಿವೇಕ್. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಕಪಿಲ್ ಶರ್ಮಾ ಇದನ್ನು ಅಲ್ಲಗಳೆದಿದ್ದರು.
ಇದನ್ನೂ ಓದಿ: ‘ರಾಧೆ ಶ್ಯಾಮ್’ ವಿಮರ್ಶೆ: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ
ಪ್ರಚಾರದ ಗಿಮಿಕ್ಗಾಗಿ ‘ದಿ ಕಪಿಲ್ ಶರ್ಮಾ ಶೋ’ಗೆ ಮಸಿ ಬಳಿದ ನಿರ್ದೇಶಕ? ಕಪಿಲ್ ಹೇಳಿದ್ದಿಷ್ಟು