
ಹಿರಿಯ ನಟ ಧರ್ಮೇಂದ್ರ (Dharmendra) ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕುಟುಂಬ ಈ ಸುದ್ದಿಯನ್ನು ದೃಢಪಡಿಸಿದೆ. ಅವರು ಒಂದು ವಾರದ ಹಿಂದೆ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಈಗ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದ ನಂತರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಿಖರ ಮತ್ತು ವಿವರವಾದ ಮಾಹಿತಿ ಇನ್ನೂ ಹೊರಬಂದಿಲ್ಲ. ಈ ಮಧ್ಯೆ ಮಗ ಸನ್ನಿ ಡಿಯೋಲ್ ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ಮಾಧ್ಯಮಗಳನ್ನು ವಿನಂತಿಸಿದ್ದಾರೆ.
‘ಧರ್ಮೇಂದ್ರ ಅವರ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದೆ. ಹೆಚ್ಚಿನ ಮಾಹಿತಿ ಮತ್ತು ಆರೋಗ್ಯ ಅಪ್ಡೇಟ್ ಲಭ್ಯವಾದ ತಕ್ಷಣ ಹಂಚಿಕೊಳ್ಳಲಾಗುವುದು. ಎಲ್ಲರೂ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕೆಂದು ನಾನು ವಿನಂತಿಸುತ್ತೇನೆ. ಕುಟುಂಬದ ಗೌಪ್ಯತೆಯನ್ನು ಗೌರವಿಸುವಂತೆ ವಿನಂತಿಸುತ್ತೇನೆ’ ಎಂದು ಸನ್ನಿ ಡಿಯೋಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಟಿ ಮತ್ತು ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿ ಸೋಮವಾರ ಸಂಜೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತಲುಪಿದರು. 89 ವರ್ಷದ ಧರ್ಮೇಂದ್ರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ. ‘ಅವರು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
89 ನೇ ವಯಸ್ಸಿನಲ್ಲಿಯೂ ಧರ್ಮೇಂದ್ರ ಇನ್ನೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 202 ರಲ್ಲಿ ಅವರು ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದರು. ಇದರಲ್ಲಿ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕಿಸ್’ ಚಿತ್ರದಲ್ಲಿ ಅವರು ಶೀಘ್ರದಲ್ಲೇ ಕಾಣಿಸಿಕೊಳ್ಳಬೇಕಿದೆ. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಡಿಸೆಂಬರ್‌ನಲ್ಲಿ ಧರ್ಮೇಂದ್ರ ತಮ್ಮ 90 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ಧರ್ಮೇಂದ್ರ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಈ ವರ್ಷದ ಏಪ್ರಿಲ್‌ನಲ್ಲಿ ಧರ್ಮೇಂದ್ರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದೃಷ್ಟಿ ಕಳಪೆಯಾಗಿದ್ದ ಕಾರಣ, ಅವರು ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಲ್ಲದೆ, ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆ ಸಮಯದಲ್ಲಿ, ಅವರು ಮುಂಬೈನ ಆಸ್ಪತ್ರೆಯಿಂದ ಹೊರಬರುತ್ತಿರುವ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ‘ನನಗೆ ತುಂಬಾ ಶಕ್ತಿ ಇದೆ. ನಾನು ಇನ್ನೂ ಚೆನ್ನಾಗಿದ್ದೇನೆ’ ಎಂದು ಅವರು ಈ ವೀಡಿಯೊದಲ್ಲಿ ಪಾಪರಾಜಿಗಳಿಗೆ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Tue, 11 November 25