Dharmendra Hospitalized: ಹಿರಿಯ ನಟ ಧರ್ಮೇಂದ್ರ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ನ.10) ಉಸಿರಾಟದ ಸಮಸ್ಯೆ ಉಂಟಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿದ್ದು, ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಉಂಟಾಗಿದೆ.

ಬಾಲಿವುಡ್ನ ಖ್ಯಾತ ನಟ ಧರ್ಮೇಂದ್ರ (Dharmendra) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ವೆಂಟಿಲೇಟರ್ ಮೂಲಕ ಅವರಿಗೆ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆ ಕಡೆಯಿಂದ ಹೆಲ್ತ್ ಅಪ್ಡೇಟ್ ಬಿಡುಗಡೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಧರ್ಮೇಂದ್ರ ಅವರಿಗೆ ಈಗ 89 ವರ್ಷ ವಯಸ್ಸು. ಆ ಕಾರಣದಿಂದ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ. ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿ (Hema Malini) ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಧರ್ಮೇಂದ್ರ ಅವರು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ರೆಗ್ಯುಲರ್ ಹೆಲ್ತ್ ಚೆಕಪ್ ಮಾಡಿಸಿಕೊಂಡು ಅವರು ಮನೆಗೆ ತೆರಳಿದ್ದರು. ಅದಾಗಿ ಕೆಲವೇ ದಿನಗಳು ಕಳೆಯುವುದರೊಳಗೆ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿದೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಉಸಿರಾಟದ ಸಮಸ್ಯೆ ಇರುವುದರಿಂದ ವೆಂಟಿಲೇಟರ್ ಹಾಕಲಾಗಿದೆ. ಈ ಬಗ್ಗೆ ಕುಟುಂಬದವರು ಇನ್ನೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಮಕ್ಕಳಾದ ಬಾಬಿ ಡಿಯೋಲ್, ಸನ್ನಿ ಡಿಯೋಲ್ ಅವರು ತಂದೆಯ ಆರೋಗ್ಯದ ಬಗ್ಗೆ ಸದ್ಯದಲ್ಲೇ ಹೇಳಿಕೆ ನೀಡುವ ಸಾಧ್ಯತೆ ಇದೆ.
1960ರಿಂದಲೂ ಧರ್ಮೇಂದ್ರ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಆಗಿ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ಅವರು ನಟಿಸಿದ್ದಾರೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಈ ನಟಿಯನ್ನು ಅತಿಯಾಗಿ ಪ್ರೀತಿಸಿದ್ದ ಧರ್ಮೇಂದ್ರ; ಬ್ರೇಕಪ್ ಆಗಿದ್ದೇಕೆ?
ವಯೋಸಹಜವಾಗಿ ಅವರಿಗೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಎದುರಾದವು. ಅದರ ನಡುವೆಯೂ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. 2024ರ ಫೆಬ್ರವರಿಯಲ್ಲಿ ಬಂದ ‘ತೇರಿ ಬಾತೋಮೆ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ಕೂಡ ಧರ್ಮೇಂದ್ರ ಅವರು ನಟಿಸಿದರು. ಅಮಿತಾಭ್ ಬಚ್ಚನ್ ಅವರ ಮೊಮ್ಮೊಗ ಅಗಸ್ತ್ಯ ನಂದ ನಟನೆಯ ಹೊಸ ಸಿನಿಮಾದಲ್ಲಿ ಕೂಡ ಧರ್ಮೇಂದ್ರ ಅವರಿಗೆ ಒಂದು ಪಾತ್ರವಿದೆ. ಆ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




