‘ಧೂಮ್ 4’ ಚಿತ್ರಕತೆ ಪೂರ್ತಿ, ಈ ಬಾರಿ ಹೀರೋ ಯಾರು?
Dhoom 4: ಬಾಲಿವುಡ್ನ ಬಲು ಜನಪ್ರಿಯ ಮತ್ತು ಯಶಸ್ವಿ ಸಿನಿಮಾ ಸರಣಿಗಳಲ್ಲಿ ‘ಧೂಮ್’ ಪ್ರಮುಖವಾದುದು, ಈ ಸರಣಿಯ ಮೂರು ಸಿನಿಮಾಗಳು ಈವರೆಗೆ ತೆರೆಗೆ ಬಂದಿವೆ. ಇದೀಗ ನಾಲ್ಕನೇ ಸಿನಿಮಾದ ಚಿತ್ರಕತೆ ಪೂರ್ಣಗೊಂಡಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಆರಂಭವಾಗಲಿದೆ. ಅಂದಹಾಗೆ ಈ ಬಾರಿ ಯಾರು ‘ವಿಲನ್’ ಪಾತ್ರದಲ್ಲಿ ನಟಿಸಲಿದ್ದಾರೆ?

‘ಧೂಮ್’ ಸಿನಿಮಾ ಸರಣಿ ಬಾಲಿವುಡ್ನ (Bollywood) ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಸಿನಿಮಾ ಸರಣಿ. 2004 ರಲ್ಲಿ ಮೊದಲ ಬಾರಿಗೆ ಬಿಡುಗಡೆ ಆದ ‘ಧೂಮ್’ ಸಿನಿಮಾ ಆಗಿನ ಕಾಲಕ್ಕೆ ತನ್ನ ಭಿನ್ನ ಕತೆ, ಸ್ಟೈಲಿಷ್ ಮೇಕಿಂಗ್, ನಾಯಕ ಹಾಗೂ ವಿಲನ್ ನಡುವಿನ ಅದ್ಭುತ ಸನ್ನಿವೇಶಗಳು, ಆಕ್ಷನ್, ಹಾಗೂ ಹಾಡುಗಳಿಂದ ಸಖತ್ ಹಿಟ್ ಆಗಿತ್ತು. ಅದಾದ ಬಳಿಕ 2006 ರಲ್ಲಿ ಬಂದ ಹೃತಿಕ್ ನಟನೆಯ ‘ಧೂಮ್ 2’ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಬಳಿಕ ಆಮಿರ್ ಖಾನ್ ನಟನೆಯ ‘ಧೂಮ್ 3’ 2013 ರಲ್ಲಿ ಬಿಡುಗಡೆ ಆಯ್ತಾದರೂ ನಿರೀಕ್ಷಿತ ಯಶಸ್ಸು ಕಾಣಲಿಲ್ಲ, ಇದೀಗ ‘ಧೂಮ್ 4’ ಬರಲು ಸಜ್ಜಾಗಿದೆ.
ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡುತ್ತಾ ಬಂದಿರುವ ‘ಧೂಮ್’ ಸಿನಿಮಾ ಸರಣಿಯ ನಾಲ್ಕನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಸಿನಿಮಾದ ಚಿತ್ರಕತೆ ಬಹುತೇಕ ಅಂತ್ಯವಾಗಿದ್ದು, ಶೀಘ್ರವೇ ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಆಗಲಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ‘ಖಾಕಿ’, ‘ವಾರ್’, ‘ಬ್ಲಫ್ ಮಾಸ್ಟರ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಚಿತ್ರಕತೆ ಬರೆದಿರುವ ಶ್ರೀಧರ್ ರಾಘವನ್ ಒಟ್ಟಾಗಿ ಸಿನಿಮಾದ ಚಿತ್ರಕತೆ ಬರೆದು ಮುಗಿಸಿದ್ದಾರೆ.
‘ಧೂಮ್’ ಸಿನಿಮಾಗಳಲ್ಲಿ ನಾಯಕನಿಗಿಂತಲೂ ಪ್ರತಿನಾಯಕನಿಗೆ ಹೆಚ್ಚು ಮಹತ್ವ. ಈ ಹಿಂದೆ ಬಂದಿರುವ ಮೂರು ಧೂಮ್ ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಅವರುಗಳೇ ನಿರ್ವಹಿಸಿದ್ದಾರೆ. ‘ಧೂಮ್ 4’ನಲ್ಲಿಯೂ ಅವರೇ ಪೊಲೀಸ್ ಪಾತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿ. ಆದರೆ ಈ ಬಾರಿ ಆಂಟಿ ಹೀರೋ ಯಾರಾಗಲಿದ್ದಾರೆ ಎಂಬುದು ಕುತೂಹಲ.
ಇದನ್ನೂ ಓದಿ:ಸೌತ್ ಬಳಿಕ ಬಾಲಿವುಡ್ನಲ್ಲೂ ಶ್ರೀಲೀಲಾಗೆ ಸಿಗುತ್ತಿದೆ ಸ್ಟಾರ್ ನಟಿ ಪಟ್ಟ
ಕೆಲ ಮೂಲಗಳ ಪ್ರಕಾರ ರಣ್ಬೀರ್ ಕಪೂರ್ ಅವರು ‘ಧೂಮ್ 4’ ಸಿನಿಮಾನಲ್ಲಿ ವಿಲನ್ ಆಗಿ ನಟಿಸಲಿದ್ದಾರಂತೆ. ರಣ್ಬೀರ್ ಕಪೂರ್, ಲವ್ವರ್ ಬಾಯ್ ಇಮೇಜಿನಿಂದ ಹೊರಬಂದು ಹಲವು ಆಕ್ಷನ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಇದೀಗ ‘ಧೂಮ್ 4’ ಸಿನಿಮಾನಲ್ಲಿ ಖತರ್ನಾಕ್ ಕಳ್ಳನ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಈಗಾಗಲೇ ರಣ್ಬೀರ್ ಕಪೂರ್ ಅವರ ಬಳಿ ಸಿನಿಮಾ ಬಗ್ಗೆ ಮಾತನಾಡಿದ್ದು, ರಣ್ಬೀರ್ ಕಪೂರ್ ಸಹ ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ.
ರಣ್ಬೀರ್ ಕಪೂರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ರಾಮಾಯಣ ಆಧರಿಸಿದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಸಂಜಯ್ ಲೀಲಾ ಬನ್ಸಾಲಿಯ ‘ಲವ್ ಆಂಡ್ ವಾರ್’ನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ 2’ ಅದಾದ ಬಳಿಕ ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅದರ ಬಳಿಕವಷ್ಟೆ ಅವರು ‘ಧೂಮ್ 4’ನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




