ರಣವೀರ್ ಸಿಂಗ್ ಸಿನಿಮಾಗೆ ಸಂಕಷ್ಟ: ಬಿಡುಗಡೆಗೂ ಮುನ್ನ ವಿವಾದದಲ್ಲಿ ಸಿಲುಕಿದ ‘ಧುರಂಧರ್’

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 5ರಂದು ಬಿಡುಗಡೆ ಆಗಬೇಕಿರುವ ಈ ಸಿನಿಮಾದ ಮೇಲೆ ದೆಹಲಿ ಹೈಕೋರ್ಟ್​​ನಲ್ಲಿ ಕೇಸ್ ಹಾಕಲಾಗಿದೆ. ಈ ಸಿನಿಮಾಗೆ ಎದುರಾಗಿರುವ ಆಕ್ಷೇಪಗಳನ್ನು ಪರಿಶೀಲಿಸುವಂತೆ ಸೆನ್ಸಾರ್ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ.

ರಣವೀರ್ ಸಿಂಗ್ ಸಿನಿಮಾಗೆ ಸಂಕಷ್ಟ: ಬಿಡುಗಡೆಗೂ ಮುನ್ನ ವಿವಾದದಲ್ಲಿ ಸಿಲುಕಿದ ‘ಧುರಂಧರ್’
Ranveer Singh

Updated on: Dec 01, 2025 | 7:38 PM

ನಟ ರಣವೀರ್ ಸಿಂಗ್ (Ranveer Singh) ಅವರು ಹಲವು ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗೆ ಅವರು ಗೋವಾ ಸಿನಿಮೋತ್ಸವದ ವೇದಿಕೆಯಲ್ಲಿ ಮಾತನಾಡುವಾಗ ದೈವಕ್ಕೆ ಅವಮಾನ ಮಾಡಿದರು. ದೈವ ಎನ್ನುವ ಬದಲು ದೆವ್ವ ಎಂದರು. ಅಲ್ಲದೇ, ರಿಷಬ್ ಶೆಟ್ಟಿ ನಟನೆಯನ್ನು ವಿಚಿತ್ರವಾಗಿ ಅನುಕರಿಸಿ ತೋರಿಸಿದರು. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಅವರು ಟೀಕೆ ಎದುರಿಸುವಂತಾಯಿತು. ಅಲ್ಲದೇ, ಈಗ ರಣವೀರ್ ಸಿಂಗ್ ನಟನೆಯ ಹೊಸ ಸಿನಿಮಾ ‘ಧುರಂಧರ್’ (Dhurandhar) ವಿವಾದಕ್ಕೆ ಸಿಲುಕಿದೆ. ಬಿಡುಗಡೆಗೆ ದಿನಗಣನೆ ಶುರುವಾಗಿರುವಾಗ ಸೆನ್ಸಾರ್ ಸಮಸ್ಯೆ ಎದುರಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಸಂಘರ್ಷದ ಕುರಿತು ‘ಧುರಂಧರ್’ ಸಿನಿಮಾ ಸಿದ್ಧವಾಗಿದೆ. ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣ ಆಗಿದೆ. ಹುತಾತ್ಮ ಮೇಜರ್ ಮೋಹಿತ್ ಶರ್ಮಾ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆ ಕಾರಣಕ್ಕಾಗಿ ಮೋಹಿತ್ ಶರ್ಮಾ ಕುಟುಂಬದವರು ಕೋರ್ಟ್ ಮೆಟ್ಟಿಲು ಏರಿದ್ದಾರೆ.

‘ಧುರಂಧರ್’ ಸಿನಿಮಾವನ್ನು ಮಾಡುವುದಕ್ಕೆ ಮೇಜರ್ ಮೋಹಿತ್ ಶರ್ಮಾ ಅವರ ಕುಟುಂಬದವರ ಬಳಿ ಅನುಮತಿ ಪಡೆದುಕೊಂಡಿಲ್ಲ. ಇದರಿಂದಾಗಿ ಅವರ ಬಗ್ಗೆ ಸಿನಿಮಾದ ಮೂಲಕ ತಪ್ಪು ಮಾಹಿತಿ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕುಟುಂಬದವರು ಚಿತ್ರತಂಡದ ವಿರುದ್ಧ ಆಕ್ಷೇಪ ಎತ್ತಿದ್ದಾರೆ. ದೆಹಲಿ ಹೈಕೋರ್ಟ್​​ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ.

ಮೇಜರ್ ಮೋಹಿತ್ ಶರ್ಮಾ ಅವರ ಕುಟುಂಬದವರು ಎತ್ತಿರುವ ಆಕ್ಷೇಪಗಳನ್ನು ಪರಿಶೀಲಿಸುವಂತೆ ಸೆನ್ಸಾರ್ ಮಂಡಳಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ. ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಗಬೇಕಿದೆ. ಒಂದು ವೇಳೆ ವಿವಾದ ಹೆಚ್ಚಾದರೆ ಸಿನಿಮಾದ ಬಿಡುಗಡೆಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಡಿಸೆಂಬರ್ 5ರೊಳಗೆ ಎಲ್ಲ ವಿಘ್ನಗಳನ್ನು ಪರಿಹರಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ

‘ಉರಿ: ದ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಅವರು ‘ಧುರಂಧರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಂದಾಜು 200 ಕೋಟಿ ರೂಪಾಯಿ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ರಣವೀರ್ ಸಿಂಗ್ ಜೊತೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್ ಮುಂತಾದವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.