25 ಕೋಟಿ ಲಂಚಕ್ಕೆ ಬೇಡಿಕೆ: ಶಾರುಖ್ ಪುತ್ರನ ಬಂಧಿಸಿದ್ದ ಸಮೀರ್ ವಿರುದ್ಧ ಇಡಿ ದೂರು

|

Updated on: Feb 10, 2024 | 11:46 PM

Sameer-Aryan Khan: ಶಾರುಖ್ ಖಾನ್ ಪುತ್ರನ ಬಂಧನ ಪ್ರಕರಣದಲ್ಲಿ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಹೊತ್ತಿರುವ ಅಧಿಕಾರಿ ಸಮೀರ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.

25 ಕೋಟಿ ಲಂಚಕ್ಕೆ ಬೇಡಿಕೆ: ಶಾರುಖ್ ಪುತ್ರನ ಬಂಧಿಸಿದ್ದ ಸಮೀರ್ ವಿರುದ್ಧ ಇಡಿ ದೂರು
Follow us on

ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖಡೆ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದೂರು ದಾಖಲಿಸಿದೆ. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಸಮೀರ್ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ಈ ಹಿಂದೆ ಎಫ್​ಐಆರ್ ದಾಖಲಿಸಿತ್ತು. ಅದರ ಬೆನ್ನಲ್ಲೆ ಇಡಿ ಸಮೀರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದೂರು ದಾಖಲಿಸಿದೆ. ಪ್ರಕರಣದಲ್ಲಿ ಸಮೀರ್ ಮಾತ್ರವೇ ಅಲ್ಲದೆ ಎನ್​ಸಿಬಿಯ ಇನ್ನೂ ಕೆಲವು ಅಧಿಕಾರಿಗಳಿಗೆ ಸಹ ಸಮನ್ಸ್ ನೀಡಲಾಗಿದೆ. ಇಡಿ ಅಧಿಕಾರಿಗಳು ದೂರು ದಾಖಲಿಸಿದ ಬೆನ್ನಲ್ಲೆ ಬಾಂಬೆ ಹೈಕೋರ್ಟ್ ಮೊರೆ ಹೋಗಿರುವ ಸಮೀರ್ ವಾಂಖಡೆ, ಪ್ರಕರಣದ ಮುಂದಿನ ಕ್ರಮಗಳಿಂದ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

2021ರ ಅಕ್ಟೋಬರ್ ತಿಂಗಳಲ್ಲಿ ಮುಂಬೈನ ಕ್ರೊಡೆಲಿಯಾ ಕ್ರೂಸ್​ನಲ್ಲಿ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ಬಂಧಿಸಿತ್ತು. ಆಗ ಎನ್​ಸಿಬಿಯ ಮುಖ್ಯಸ್ಥನಾಗಿ ಸಮೀರ್ ವಾಂಖಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಆರ್ಯನ್ ಖಾನ್ ಬಂಧನದಲ್ಲಿ ಎನ್​ಸಿಬಿಗೆ ಸೇರದ ಕಿರಣ್ ಗೋಸಾವಿ, ಸಾನ್​ವಿಲ್ ಡಿಸೋಜಾ ಅವರುಗಳ ಹೆಸರುಗಳು ಕೇಳಿ ಬಂದಿತ್ತು. ಒಬ್ಬ ಸ್ಥಳೀಯ ಬಿಜೆಪಿ ಮುಖಂಡನ ಪಾತ್ರವೂ ಈ ಬಂಧನದಲ್ಲಿ ಇರುವುದಾಗಿ ಗೊತ್ತಾಗಿತ್ತು.

ಇದನ್ನೂ ಓದಿ:ಪ್ರೀತಿಯಿಂದ ಹಗ್ ಕೊಟ್ಟ ಶಾರುಖ್ ಖಾನ್​; ತಡೆಯಲಾಗದೆ ಕಣ್ಣೀರು ಹಾಕಿದ ಅಭಿಮಾನಿ

ಅಲ್ಲಿಂದ ಪ್ರಕರಣದ ಬಗ್ಗೆ ಎರಡು ರೀತಿಯ ಸಾರ್ವುಜನಿಕ ಅಭಿಪ್ರಾಯಗಳು ವ್ಯಕ್ತವಾಗಲು ಆರಂಭವಾದವು. ಅಷ್ಟರಲ್ಲಿಯೇ ಕಿರಣ್ ಗೋಸಾಯಿಯ ವಾಹನ ಚಾಲಕ ತಾನು ಶಾರುಖ್ ಖಾನ್​ರ ಮ್ಯಾನೇಜರ್ ಅವರಿಂದ ಲಂಚದ ಹಣವನ್ನು ಕಿರಣ್ ಪರವಾಗಿ ಪಡೆದಿದ್ದಾಗಿ ಹೇಳಿಕೆ ನೀಡಿದರು. ಕಿರಣ್ ಗೋಸಾಯಿ, ಎನ್​ಸಿಬಿ ಪರವಾಗಿ ಶಾರುಖ್ ಖಾನ್​ರ ಮ್ಯಾನೇಜರ್ ಪೂಜಾ ದದ್ಲಾನಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಷಯ ಬಹಿರಂಗಪಡಿಸಿದ. ಪ್ರಕರಣ ಕುರಿತಾಗಿ ವಿಚಾರಣೆ ನಡೆದಾಗಲೂ ಸಹ ಈ ಎಲ್ಲ ಅಂಶಗಳು ಚರ್ಚೆಗೆ ಬಂದವು.

25 ದಿನಗಳ ಬಳಿಕ ಆರ್ಯನ್ ಖಾನ್ ಗೆ ಜಾಮೀನು ದೊರೆತಿತು. ಅದಾದ ಬಳಿಕ ನಡೆದ ವಿಚಾರಣೆಯಲ್ಲಿ ಸಮೀರ್ ವಾಂಖಡೆ ನಡೆಸಿದ ತನಿಖೆ ಹಾಗೂ ಬಂಧನ ಕಾನೂನು ಬಾಹಿರವಾಗಿತ್ತು ಎಂಬ ಅಭಿಪ್ರಾಯ ಕೇಳಿ ಬಂತು. ಎನ್​ಸಿಬಿ ಸಹ ಈ ಪ್ರಕರಣದ ಆಂತರಿಕ ತನಿಖೆ ನಡೆಸಿ, ಆರ್ಯನ್ ಖಾನ್ ಬಂಧನ ವೈಯಕ್ತಿಕ ಕಾರಣಗಳಿಗೆ ಆಗಿರುವಂಥಹದ್ದೆಂದು ವರದಿ ನೀಡಿತು. ಎನ್​ಸಿಬಿ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಆರ್ಯನ್ ಖಾನ್ ಹೆಸರು ಕೈಬಿಡಲಾಯ್ತು. ಸಾಕ್ಷ್ಯಗಳ ಕೊರತೆಯಿಂದಾಗಿ ಪ್ರಕರಣದಿಂದ ಆರ್ಯನ್ ಖಾನ್ ಹೆಸರು ಕೈಬಿಡಲಾಯ್ತು.

ಅದಾದ ಬಳಿಕ ಪ್ರಕರಣದ ಬೆನ್ನ ಹತ್ತಿದ ಸಿಬಿಐ, ಸಮೀರ್ ವಾಂಖಡೆ ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಿ ಎಫ್​ಐಆರ್ ದಾಖಲಿಸಿಕೊಂಡಿತು. ಇದೀಗ ಇಡಿಯು ಅಕ್ರಮ ವರ್ಗಾವಣೆ ಆರೋಪವನ್ನು ಸಮೀರ್ ವಿರುದ್ಧ ಹೊರಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ