ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಮಾರ್ಚ್ 11ರಂದು ಅಧಿಸೂಚನೆ ಹೊರಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ಜೋರಾಗಿದೆ. ಜನ ಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಟಿ ಕಂಗನಾ ರಣಾವತ್ (Kangana Ranaut) ಅವರು ಕೂಡ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಆದರೆ ದಳಪತಿ ವಿಜಯ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ (CAA) ಬಗ್ಗೆ ತಕರಾರು ತೆಗೆದಿದ್ದಾರೆ.
ಕಂಗನಾ ರಣಾವತ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಿಎಎ ಎಂದು ಕ್ಯಾಪ್ಷನ್ ನೀಡಿದ್ದು ಇಂಡಿಯನ್ ಫ್ಲ್ಯಾಗ್ ಎಮೋಜಿಯನ್ನು ಅವರು ಬಳಸಿದ್ದಾರೆ. ಆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆಗುತ್ತಿರುವುದಕ್ಕೆ ತಮ್ಮ ಬೆಂಬಲ ಇದೆ ಎಂಬುದನ್ನು ಅವರು ಸೂಚಿಸಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ವಿಡಿಯೋವನ್ನು ಕಂಗನಾ ರಣಾವತ್ ಅವರು ಈಗ ಹಂಚಿಕೊಂಡಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ನಿಮ್ಮ ಭಾವನೆ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೂ ಮುನ್ನ ಸಿಎಎ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳಿ’ ಎಂದು ಕಂಗನಾ ರಣಾವತ್ ಅವರು ಕ್ಯಾಪ್ಷನ್ ನೀಡಿದ್ದಾರೆ.
ಇದನ್ನೂ ಓದಿ: ಸಿಎಎ ಸ್ವೀಕಾರಾರ್ಹವಲ್ಲ ತಮಿಳುನಾಡಿನಲ್ಲಿ ಜಾರಿಯಾಗದಂತೆ ನೋಡಿಕೊಳ್ಳಬೇಕು: ದಳಪತಿ ವಿಜಯ್
ಕಂಗನಾ ರಣಾವತ್ ಅವರು ಇನ್ನೂ ನೇರವಾಗಿ ರಾಜಕೀಯಕ್ಕೆ ಕಾಲಿಟ್ಟಿಲ್ಲ. ಆದರೂ ಅವರು ರಾಜಕೀಯದ ಕುರಿತು ಅನೇಕ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ತಿಳಿಸುತ್ತಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧರಿಸಿ ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವುದರ ಜೊತೆ ನಿರ್ದೇಶಕವನ್ನೂ ಅವರೇ ಮಾಡಿದ್ದಾರೆ.
ಇದನ್ನೂ ಓದಿ: ಭಾರತೀಯ ಮುಸ್ಲಿಮರು ಸಿಎಎ ಸ್ವಾಗತಿಸಬೇಕು: ಅಖಿಲ ಭಾರತ ಮುಸ್ಲಿಂ ಜಮಾತ್ ಮುಖ್ಯಸ್ಥ
ಟಿವಿ9 ನೆಟ್ವರ್ಕ್ ನಡೆಸಿದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾನ್ಕ್ಲೇವ್ನ ಸಂವಾದದಲ್ಲಿ ಕಂಗನಾ ಅವರು ರಾಜಕೀಯದ ಎಂಟ್ರಿ ಕುರಿತ ಪ್ರಶ್ನೆಗೆ ಉತ್ತರಿಸಿದ್ದರು. ‘ದೇಶಕ್ಕಾಗಿ ಏನನ್ನಾದರೂ ಮಾಡಲು ನನಗೆ ಸೀಟ್, ಟಿಕೆಟ್ ಅಥವಾ ಅಧಿಕಾರ ಬೇಕಿಲ್ಲ. ನಟಿಯಾಗಿಯೇ ನಾನು ರಾಜಕೀಯ ಪಕ್ಷಗಳ ಎದುರು ಹೋರಾಡಿದ್ದೇನೆ. ಒಂದು ವೇಳೆ ನಾನು ರಾಜಕೀಯಕ್ಕೆ ಬರಬೇಕು ಎಂದರೆ ಇದು ಸರಿಯಾದ ಸಮಯ’ ಎಂದು ಕಂಗನಾ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.