Farhan Akhtar: ದೀಪಾವಳಿ ಆಚರಿಸಿದ ಫರ್ಹಾನ್ ಅಖ್ತರ್ ವಿರುದ್ಧ ದ್ವೇಷ ಕಾರುತ್ತಿರುವ ಒಂದು ವರ್ಗದ ನೆಟ್ಟಿಗರು
Deepavali 2021: ಸ್ನೇಹಿತರ ಜೊತೆ ಸೇರಿ ದೀಪಾವಳಿ ಹಬ್ಬ ಆಚರಿಸಿದ ಫೋಟೋಗಳನ್ನು ಫರ್ಹಾನ್ ಅಖ್ತರ್ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ ಕಮೆಂಟ್ ಮಾಡುತ್ತಿರುವ ಒಂದು ವರ್ಗದ ನೆಟ್ಟಿಗರು ದ್ವೇಷ ಕಾರುತ್ತಿದ್ದಾರೆ.
ಬಾಲಿವುಡ್ನ ಖ್ಯಾತ ನಟ ಫರ್ಹಾನ್ ಅಖ್ತರ್ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿರುತ್ತಾರೆ. ಈಗ ಅವರು ದೀಪಾವಳಿ ಆಚರಿಸಿ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಮುಸ್ಲಿಂ ಧರ್ಮದವರಾದ ಫರ್ಹಾನ್ ಅಖ್ತರ್ ಅವರು ದೀಪಾವಳಿ ಹಬ್ಬ ಆಚರಿಸಿದ್ದು ಸರಿಯಲ್ಲ ಎಂಬುದು ಒಂದು ವರ್ಗದ ನೆಟ್ಟಿಗರ ವಾದ. ಹಾಗಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.
ತಮ್ಮ ನೇರ ನಡೆ-ನುಡಿಗಳಿಂದ ಗುರುತಿಸಿಕೊಂಡವರು ಫರ್ಹಾನ್ ಅಖ್ತರ್. ತಮಗೆ ಸರಿ ಎನಿಸಿದ್ದನ್ನು ಅವರು ಮಾಡುತ್ತಾರೆ. ಆ ಕಾರಣಕ್ಕಾಗಿ ಪದೇಪದೇ ಅವರು ಟ್ರೋಲಿಗರಿಗೆ ಆಹಾರ ಆಗುತ್ತಾರೆ. ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ. ಅದೇ ರೀತಿ ಫರ್ಹಾನ್ ಅಖ್ತರ್ ಕೂಡ ತಮ್ಮ ‘ಎಕ್ಸೆಲ್ ಎಂಟರ್ಟೇ ನ್ಮೆಂಟ್’ ಕಚೇರಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಪ್ರೇಯಸಿ ಶಿಬಾನಿ ದಂಡೇಕರ್, ಬ್ಯುಸಿನೆಸ್ ಪಾರ್ಟ್ನರ್ ರಿತೇಶ್ ಸಿದ್ವಾನಿ, ರಿತೇಶ್ ಪತ್ನಿ ಡಾಲಿ ಸಿದ್ವಾನಿ ಮುಂತಾದವರು ಹಬ್ಬದ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಹಿಂದುಗಳ ಹಬ್ಬವನ್ನು ಫರ್ಹಾನ್ ಅಖ್ತರ್ ಆಚರಿಸಿರುವುದಕ್ಕೆ ಕೆಲವರು ಕಿಡಿಕಾರುತ್ತಿದ್ದಾರೆ.
ಕಮೆಂಟ್ಗಳ ಮೂಲಕ ಫರ್ಹಾನ್ ಅಖ್ತರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ‘ಇವರ ಅಪ್ಪ (ಜಾವೇದ್ ಅಖ್ತರ್) ಯಾವ ಧರ್ಮವನ್ನೂ ನಂಬುವುದಿಲ್ಲ. ಆದರೆ ಇಲ್ಲಿ ಇವನು ಡ್ರಾಮಾ ಮಾಡುತ್ತಿದ್ದಾನೆ’ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ‘ಒಬ್ಬ ಮುಸ್ಲಿಂ ಆಗಿ ನೀನು ಮಾಡುತ್ತಿರುವುದೇನು?’ ಎಂದು ಹಲವು ಮಂದಿ ಪ್ರಶ್ನೆ ಮಾಡಿದ್ದಾರೆ. ‘ಈತ ಹೆಸರಿಗೆ ಮಾತ್ರ ಮುಸ್ಲಿಂ’ ಎಂದು ಕುಹಕಿಸಿ ಕೆಲವರು ಕಮೆಂಟ್ ಮಾಡಿದ್ದಾರೆ.
View this post on Instagram
ಈ ರೀತಿ ಟ್ರೋಲ್ಗೆ ಒಳಗಾಗಿರುವುದು ಫರ್ಹಾನ್ ಅಖ್ತರ್ ಮಾತ್ರವಲ್ಲ. ಈ ಹಿಂದೆ ಅನೇಕ ಸೆಲೆಬ್ರಿಟಿಗಳನ್ನು ಇದೇ ಕಾರಣಕ್ಕಾಗಿ ಟ್ರೋಲ್ ಮಾಡಲಾಗಿತ್ತು. ಶಾರುಖ್ ಖಾನ್ ಮನೆಯಲ್ಲಿ ದೀಪಾವಳಿ ಆಚರಿಸಿದಾಗಲೂ ಇದೇ ರೀತಿಯ ಕಮೆಂಟ್ಗಳು ಬರುತ್ತವೆ. ಸೈಫ್ ಅಲಿ ಖಾನ್ ಅವರು ಈ ವರ್ಷ ಗಣಪತಿ ಹಬ್ಬ ಆಚರಿಸಿದ್ದರು. ಗಣಪತಿ ವಿಗ್ರಹಕ್ಕೆ ಅವರು ಕೈ ಮುಗಿಯುತ್ತಿರುವ ಫೋಟೋವನ್ನು ಕರೀನಾ ಕಪೂರ್ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಕಮೆಂಟ್ ಮಾಡಿದ್ದ ಅನೇಕರು ಖಾರದ ಮಾತುಗಳಿಂದ ನಿಂದಿಸಿದ್ದರು.
ಇದನ್ನೂ ಓದಿ:
ಅಭಿಮಾನಿಗಳಿಗೆ ರಶ್ಮಿಕಾ ದೀಪಾವಳಿ ವಿಶ್ ಮಾಡಿದ್ದು ಹೇಗೆ?
ಮೇಘನಾ ಸರ್ಜಾ ಮಗ ರಾಯನ್ ದೀಪಾವಳಿ ವಿಶ್
Published On - 9:59 am, Fri, 5 November 21