‘ದಂಗಲ್’ ನಟಿಗೆ ದಕ್ಷಿಣ ಭಾರತ ಸಿನಿಮಾದಲ್ಲಿ ಕಾಸ್ಟಿಂಗ್ ಕೌಚ್ ಅನುಭವ

Fatima Sana Shaikh: ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾದಲ್ಲಿ ನಟಿಸಿದ್ದ ನಟಿ ಫಾತಿಮಾ ಸನಾ ಷೇಖ್ ಒಂದೇ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಟಿ ಹೇಳಿರುವುದೇನು? ಇಲ್ಲಿದೆ ಮಾಹಿತಿ...

‘ದಂಗಲ್’ ನಟಿಗೆ ದಕ್ಷಿಣ ಭಾರತ ಸಿನಿಮಾದಲ್ಲಿ ಕಾಸ್ಟಿಂಗ್ ಕೌಚ್ ಅನುಭವ
Fatima Sana Shaikh

Updated on: Jan 28, 2025 | 12:57 PM

ಕಾಸ್ಟಿಂಗ್ ಕೌಚ್ ಅಥವಾ ಪಾತ್ರಕ್ಕೆ ಪಲ್ಲಂಗ ಎಂಬ ಪಿಡುಗು ಚಿತ್ರರಂಗಕ್ಕೆ ಅಂಟಿ ದಶಕಗಳೇ ಕಳೆದಿವೆ. ಕಳೆದ ಕೆಲ ವರ್ಷಗಳಿಂದ ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ‘ಮೀ ಟೂ’ ಚಳವಳಿ ಬಳಿಕ ಚಿತ್ರರಂಗದ ಹಲವು ಕತ್ತಲೆ ಕೋಣೆಯ ವ್ಯವಹಾರಗಳು ಬಹಿರಂಗವಾಗಿವೆ. ಈಗಲೂ ಆಗುತ್ತಿವೆ. ಇದೀಗ ಹಿಂದಿ ನಟಿಯೊಬ್ಬರು ತಮಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವ ಆಫರ್ ಬಂದಾಗ ಕಾಸ್ಟಿಂಗ್ ಕೌಚ್ ಅನುಭವ ಎದುರಾಗಿತ್ತು ಎಂದಿದ್ದಾರೆ.

ಆಮಿರ್ ಖಾನ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ದಂಗಲ್’ನಲ್ಲಿ ಆಮಿರ್​ರ ಪುತ್ರಿಯ ಪಾತ್ರದಲ್ಲಿ ನಟಿಸಿರುವ ಫಾತಿಮಾ ಸನಾ ಷೇಖ್ ಇದೀಗ ತಾವು ಎದಿರಿಸಿದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಒಂದು ನಂಬಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದರೆ ಆ ನಂತರ ಬಾಲಿವುಡ್​ನಲ್ಲಿ ಒಳ್ಳೆಯ ಸಿನಿಮಾ ಆಫರ್​ಗಳು ಸಿಗುತ್ತವೆ ಎಂದು. ಅದೇ ಕಾರಣಕ್ಕೆ ನಾನು ಕೆಲ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದೆ. ಆದರೆ ಅಲ್ಲಿ ನನಗೆ ಒಳ್ಳೆ ಅನುಭವ ಆಗಿಲ್ಲ ಎಂದಿದ್ದಾರೆ.

ಹೈದರಾಬಾದ್​ನಲ್ಲಿ ಸಿನಿಮಾದ ಆಡಿಷನ್ ಒಂದು ನಡೆಯಲಿದೆ ಅದಕ್ಕಾಗಿ ಪ್ರೊಫೈಲ್ ಕಳಿಸಿ ಎಂದು ನನಗೆ ಆಪ್ತರೊಬ್ಬರು ಹೇಳಿದರು. ಅಂತೆಯೇ ನಾನು ನನ್ನ ಫೋಟೊಗಳನ್ನು ಕಳಿಸಿದರೆ ಆ ನಂತರ ಕರೆ ಮಾಡಿದ ವ್ಯಕ್ತಿಯೊಬ್ಬ ‘ಈ ಪಾತ್ರಕ್ಕಾಗಿ ನೀವು ಏನು ಬೇಕಾದರೂ ಮಾಡಲು ತಯಾರಿದ್ದೀರ?’ ಎಂದು ಕೇಳಿದ. ಆತನ ಉದ್ದೇಶ ನನಗೆ ಅರ್ಥವಾಯ್ತು, ಆದರೆ ನಾನು ಅದೇನೂ ಅರ್ಥವಾಗಿಲ್ಲವೇನೋ ಎಂಬಂತೆ ‘ಈ ಪಾತ್ರಕ್ಕಾಗಿ ನಾನು ಸಾಕಷ್ಟು ಶ್ರಮ ಹಾಕುತ್ತೇನೆ. ಪಾತ್ರದ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡುತ್ತೇನೆ’ ಎಂದೆ. ಆದರೆ ಆತ ಪದೇ ಪದೇ ‘ಏನು ಬೇಕಾದರೂ ಮಾಡಲು ತಯಾರಿದ್ದೀರ’ ಎಂದು ಕೇಳುತ್ತಲೇ ಇದ್ದ. ನಾನೂ ಸಹ ಆತನ ಉದ್ದೇಶ ಅರ್ಥವಾಗದ ರೀತಿಯಲ್ಲಿಯೇ ಉತ್ತರಿಸುತ್ತಿದ್ದ. ಆತ ಬಾಯಿಬಿಟ್ಟು ನೇರವಾಗಿ ಕೇಳಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಕೊನೆಗೆ ಆತ ಇರಿಟೇಟ್ ಆಗಿ ಫೋನ್ ಕಟ್ ಮಾಡಿದ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಕಮಲ್ ಹಾಸನ್; ಗಾಯಕಿಯ ಅಸಮಾಧಾನ

ಅದಾದ ಬಳಿಕ ಹೈದರಾಬಾದ್​ನಲ್ಲಿ ನಡೆದ ಸಿನಿಮಾ ಪಾರ್ಟಿಯಲ್ಲಿ ಫಾತಿಮಾ ಭಾಗವಹಿಸಿದ್ದರಂತೆ. ಅಲ್ಲಿ ಸಾಕಷ್ಟು ಮಂದಿ ತೆಲುಗು ಸಿನಿಮಾದ ಸಣ್ಣ ಮತ್ತು ಮಧ್ಯಮ ನಿರ್ಮಾಪಕರು ಇದ್ದರಂತೆ. ಅಲ್ಲಿ ಅವರು ನೇರವಾಗಿಯೇ ತಮ್ಮೊಂದಿಗೆ ‘ಸಹಕರಿಸುವಂತೆ’ ಕೇಳುತ್ತಿದ್ದರು. ಇದು ನನಗೆ ಶಾಕ್ ತಂದಿತು’ ಎಂದಿದ್ದಾರೆ ಫಾತಿಮಾ ಸನಾ ಷೇಖ್.

ಫಾತಿಮಾ ಸನಾ ಷೇಖ್ ಈ ವರೆಗೆ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ನೂವ್ವು ನೇನು ಒಕ್ಕಟೌದಾಮ್’ ಆ ಸಿನಿಮಾ ಅಷ್ಟೇನೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಆ ನಂತರ ಫಾತಿಮಾ ಯಾವುದೇ ತೆಲುಗು ಸಿನಿಮಾದಲ್ಲಿ ನಟಿಸಲಿಲ್ಲ. ಇದೀಗ ಫಾತಿಮಾ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ