ಈ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ‘ಫೈಟರ್’ ಸಿನಿಮಾ (Fighter Movie) ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇಂದು (ಜನವರಿ 15) ಈ ಚಿತ್ರದ ಟ್ರೇಲರ್ (Fighter Trailer) ರಿಲೀಸ್ ಆಗಿದೆ. ಭಯೋತ್ಪಾದನೆ ವಿರುದ್ಧ ಯುದ್ಧ ಸಾರುವ ಭಾರತೀಯ ವಾಯುಸೇನೆಯ ವೀರರ ಕಥೆ ಈ ಸಿನಿಮಾದಲ್ಲಿ ಇರಲಿದೆ. ಯುದ್ಧ ವಿಮಾನಗಳ ಪೈಲೆಟ್ ಆಗಿ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ (Hrithik Roshan) ನಟಿಸಿದ್ದಾರೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ.
‘ಫೈಟರ್’ ಸಿನಿಮಾಗೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶಭಕ್ತಿಯ ಕಹಾನಿ ಇರುವ ಸಿನಿಮಾ ಬಿಡುಗಡೆ ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿರುತ್ತದೆ. ‘ಫೈಟರ್’ ಚಿತ್ರವನ್ನು ಸಿನಿಪ್ರಿಯರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
2023ರ ಜನವರಿಯಲ್ಲಿ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ಸಿನಿಮಾ ಮೂಲಕ ಭಾರಿ ಯಶಸ್ಸು ಕಂಡಿದ್ದರು. ಅದು ಕೂಡ ಆ್ಯಕ್ಷನ್ ಸಿನಿಮಾ ಆಗಿತ್ತು. ಈಗ ‘ಫೈಟರ್’ ಸಿನಿಮಾದಲ್ಲೂ ಮೈನವಿರೇಳಿಸುವಂತಹ ಸಾಹಸ ದೃಶ್ಯಗಳು ಇರಲಿವೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯುದ್ಧ ವಿಮಾನಗಳ ನಡುವಿನ ಸೆಣೆಸಾಟದ ದೃಶ್ಯಗಳು ಗಮನ ಸೆಳೆಯುತ್ತಿವೆ.
ಇದನ್ನೂ ಓದಿ: ಮಿತಿ ಮೀರಿತೇ ದೀಪಿಕಾ ಪಡುಕೋಣೆ ಗ್ಲಾಮರ್? ‘ಫೈಟರ್’ ಟೀಸರ್ನಲ್ಲಿ ಹೃತಿಕ್ ಜತೆಗಿನ ದೃಶ್ಯ ವೈರಲ್
‘ಫೈಟರ್’ ಸಿನಿಮಾ ಐಮ್ಯಾಕ್ಸ್ 3ಡಿ ವರ್ಷನ್ನಲ್ಲೂ ಬಿಡುಗಡೆ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಮಸ್ತ್ ಮನರಂಜನೆಯ ಅನುಭವ ಸಿಗಲಿದೆ. ಹೃತಿಕ್ ರೋಷನ್ ಅವರನ್ನು ಆ್ಯಕ್ಷನ್ ದೃಶ್ಯಗಳಲ್ಲಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಅಂಥ ಫ್ಯಾನ್ಸ್ಗೆ ‘ಫೈಟರ್’ ಸಿನಿಮಾ ನಿರಾಸೆ ಮಾಡುವುದಿಲ್ಲ ಎಂಬ ಭರವಸೆ ಮೂಡಿದೆ. ಟ್ರೇಲರ್ ನೋಡಿದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಲಿದೆ ಎಂದು ಸಿನಿಪ್ರಿಯರು ಭವಿಷ್ಯ ನುಡಿಯುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ‘ಫೈಟರ್’ ಸಿನಿಮಾ ನಿರ್ಮಾಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ