‘ಛಾವ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಬೆಂಕಿ; ಕಾರಣ ತಿಳಿಸಿದ ಪೊಲೀಸರು

ಚಿತ್ರಮಂದಿರದಲ್ಲಿ ‘ಛಾವ’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಆ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಚಿತ್ರಮಂದಿರದ ಸಿಬ್ಬಂದಿ ಕೂಡಲೇ ಬಂದು ಬೆಂಕಿ ಆರಿಸಿದ್ದಾರೆ. ದೇಶಾದ್ಯಂತ ‘ಛಾವ’ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್​ ಕಲೆಕ್ಷನ್ ಹೆಚ್ಚಾಗುತ್ತಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಕಥೆ ಈ ಸಿನಿಮಾದಲ್ಲಿ ಇದೆ.

‘ಛಾವ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಬೆಂಕಿ; ಕಾರಣ ತಿಳಿಸಿದ ಪೊಲೀಸರು
Chhaava Movie Screening

Updated on: Feb 26, 2025 | 9:29 PM

ಹಲವು ಕಾರಣಗಳಿಂದಾಗಿ ‘ಛಾವ’ ಸಿನಿಮಾ ಸುದ್ದಿ ಆಗುತ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರ ಮಾಡಿರುವ ಈ ಸಿನಿಮಾ ದೇಶಾದ್ಯಂತ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಕೆಲವು ವಿಘ್ನಗಳು ಕೂಡ ಎದುರಾಗುತ್ತಿವೆ. ದೆಹಲಿಯಲ್ಲಿ ಒಂದು ಘಟನೆ ನಡೆದಿದೆ. ‘ಛಾವ’ ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರದ ಒಳಗೆ ಬೆಂಕಿ ಕಾಣಿಸಿಕೊಂಡಿದೆ. ಆ ಕ್ಷಣದಲ್ಲಿ ಪ್ರೇಕ್ಷಕರು ಗಾಬರಿ ಆಗಿದ್ದಾರೆ. ಬೆಂಕಿ ಹೊತ್ತಿಕೊಂಡ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ದೆಹಲಿಯ ‘ಸೆಲೆಕ್ಟ್ ಸಿಟಿ ವಾಕ್’ ಮಾಲ್​ ಒಳಗೆ ಈ ಘಟನೆ ನಡೆದಿದೆ. ಇಂದು (ಫೆಬ್ರವರಿ 26) ಪಿವಿಆರ್​ 3ನೇ ಆಡಿಯಲ್ಲಿ ‘ಛಾವ’ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಸಂಜೆ 5.44ರ ಸುಮಾರಿಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ತಿಳಿಯಿತು. ಕೂಡಲೇ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದರಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ. ಆದರೆ ಪ್ರೇಕ್ಷಕರು ಒಂದು ಕ್ಷಣ ಆತಂಕ್ಕೆ ಒಳಗಾಗಿದ್ದು ನಿಜ.

ವೈರಲ್ ವಿಡಿಯೋ:

ಅಷ್ಟಕ್ಕೂ ಹೀಗೆ ಚಿತ್ರಮಂದಿರದ ಒಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಶಾರ್ಟ್​ ಸರ್ಕ್ಯೂಟ್​ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ದೊಡ್ಡ ಹಾನಿ ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ.

ಇದನ್ನೂ ಓದಿ: ‘ಛಾವ’ ಎಫೆಕ್ಟ್: ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನದ ವಿಷಯ ಸೇರಿಸಲು ಒತ್ತಾಯ

‘ಛಾವ’ ಸಿನಿಮಾ ನೋಡಿದ ಅನೇಕರು ಎಮೋಷನಲ್ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪ್ರೇಕ್ಷಕನೊಬ್ಬ ಚಿತ್ರಮಂದಿರದ ಪರದೆ ಹರಿದು ಹಾಕಿದ್ದ. ಇನ್ನೊಬ್ಬ ಪ್ರೇಕ್ಷಕ ಕುದುರೆ ಏರಿ, ಸಂಭಾಜಿ ರೀತಿ ವೇಷ ಹಾಕಿಕೊಂಡು ಚಿತ್ರಮಂದಿರಕ್ಕೆ ಬಂದಿದ್ದ. ಇಂಥ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಛತ್ರಪತಿ ಸಂಭಾಜಿ ಮಹಾರಾಜ್ ಜೀವನದ ಕಥೆ ‘ಛಾವ’ ಸಿನಿಮಾದಲ್ಲಿದೆ. ಈ ಸಿನಿಮಾ 12 ದಿನಗಳಲ್ಲಿ 372 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಂತಿಮವಾಗಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.