ಕುಂಭಮೇಳದ ವೈರಲ್ ಹುಡುಗಿ ಮೊದಲ ಸಿನಿಮಾಗೆ ಕಿರಿಕ್; ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ
ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ ಅವರ ಲಕ್ ಬದಲಾಗಿದೆ. ಅವರನ್ನು ಚಿತ್ರರಂಗ ಕೈಬೀಸಿ ಕರೆದಿದೆ. ಇನ್ನೇನು ಹೀರೋಯಿನ್ ಆಗಬೇಕು ಎಂಬಷ್ಟರಲ್ಲಿ ಕೆಲವು ಅಡೆತಡೆಗಳು ಉಂಟಾಗಿವೆ. ಅವರ ಸಿನಿಮಾ ಬಗ್ಗೆ ಕೆಲವರಿಂದ ಅಪಪ್ರಚಾರ ಆಗುತ್ತಿದೆ. ಅಂಥವರ ವಿರುದ್ಧ ಸಿನಿಮಾದ ನಿರ್ದೇಶಕರು ದೂರು ನೀಡಿದ್ದಾರೆ.

ಮುಂಬೈ, ಫೆಬ್ರವರಿ 26: ಮಹಾಕುಂಭಮೇಳದಲ್ಲಿ ಎಲ್ಲರ ಕಣ್ಣು ಕುಕ್ಕಿದ ಮೊನಾಲಿಸಾ ಅವರ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಅವರಿಗೆ ಸಿನಿಮಾಗಳಿಂದಲೂ ಆಫರ್ ಬಂತು. ಆದರೆ ಅವರ ಸಿನಿಮಾಗೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಮೊನಾಲಿಸಾ ನಟಿಸಬೇಕಿರುವ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸಿನಿಮಾಗೆ ತೊಂದರೆ ಆಗುತ್ತಿದೆ ಎಂದು ನಿರ್ದೇಶಕರು ಆರೋಪಿಸಿದ್ದಾರೆ. ಹಾಗಾಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಿನಿಮಾ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೊನಾಲಿಸಾ ನಟಿಸಬೇಕಿರುವ ಸಿನಿಮಾಗೆ ಸನೋಜ್ ಮಿಶ್ರಾ ಅವರು ನಿರ್ದೇಶನ ಮಾಡಲಿದ್ದಾರೆ. ಅವರ ಮೇಲೆ ಕೆಲವು ಯೂಟ್ಯೂಬರ್ ಗಳು ಇಲ್ಲಸಲ್ಲದ ವಿಡಿಯೋ ಮಾಡಿದ್ದಾರೆ. ಈ ನಿರ್ದೇಶಕ ಮಾಡಿದ ಯಾವ ಸಿನಿಮಾ ಕೂಡ ಈತನಕ ರಿಲೀಸ್ ಆಗಿಲ್ಲ. ಇಂಥವರ ಜೊತೆ 16 ವರ್ಷ ವಯಸ್ಸಿನ ಮೊನಾಲಿಸಾ ಸಿನಿಮಾ ಮಾಡಿದರೆ ಆಕೆಯ ಭವಿಷ್ಯ ಹಾಳಾಗಿ ಹೋಗುತ್ತದೆ ಎಂದು ಆರೋಪ ಮಾಡಿದ್ದಾರೆ.
ಯೂಟ್ಯೂಬ್ ಮೂಲಕ ತಮ್ಮ ಸಿನಿಮಾ ಬಗ್ಗೆ ಈ ರೀತಿ ಅಪಪ್ರಚಾರ ಮಾಡಿದವರ ವಿರುದ್ಧ ಸನೋಜ್ ಮಿಶ್ರಾ ಅವರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮುಂಬೈನಲ್ಲಿ ಅವರು ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 5 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಐವರು ಮೊನಾಲಿಸಾ ನಟನೆಯ ಸಿನಿಮಾವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಿರ್ದೇಶಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ಚಲುವೆ ಮೊನಾಲಿಸಾ ಫೋಟೊಗಾಗಿ ಟೆಂಟ್ಗೆ ನುಗ್ಗಿದ ವ್ಯಕ್ತಿ, ಸಹೋದರನ ಮೇಲೆ ಹಲ್ಲೆ
ಮೊನಾಲಿಸಾ ನಟಿಸಬೇಕಿರುವ ಸಿನಿಮಾಗೆ ‘ದಿ ಡೈರಿ ಆಫ್ ಮಣಿಪುರ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಬಜೆಟ್ ವಿಚಾರದಲ್ಲೂ ಗೋಲ್ ಮಾಲ್ ಆಗುತ್ತಿದೆ ಎಂದು ಐವರು ಆರೋಪ ಹೊರಿಸಿದ್ದಾರೆ. ‘ಇವರು ಉದ್ದೇಶಪೂರ್ವಕವಾಗಿಯೇ ನನ್ನ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಮೊನಾಲಿಸಾ ಸಿನಿಮಾ ಮಾಡುವುದು ಅವರಿಗೆ ಇಷ್ಟ ಇಲ್ಲ’ ಎಂದು ನಿರ್ದೇಶಕರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.