ಸನಾತನ ಧರ್ಮಕ್ಕೆ ಅವಮಾನ ಮಾಡಿದ ನಟಿ ದಿಶಾ ಪಟಾನಿ ಮನೆ ಎದುರು ಗುಂಡಿನ ದಾಳಿ

ಬಾಲಿವುಡ್ ನಟಿ ದಿಶಾ ಪಟಾಣಿ ಅವರ ಬರೇಲಿ ನಿವಾಸದ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಕ್ಕೆ ಈ ದಾಳಿ ನಡೆಸಿದ್ದೇವೆ ಎಂದು ದಾಳಿಕೋರರು ಹೇಳಿದ್ದಾರೆ. ಈ ಘಟನೆ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿ ಮಾಡಿದವರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಸನಾತನ ಧರ್ಮಕ್ಕೆ ಅವಮಾನ ಮಾಡಿದ ನಟಿ ದಿಶಾ ಪಟಾನಿ ಮನೆ ಎದುರು ಗುಂಡಿನ ದಾಳಿ
Disha Patani

Updated on: Sep 12, 2025 | 9:32 PM

ಭಾರತೀಯ ಚಿತ್ರರಂಗದ ಖ್ಯಾತ ನಟಿ ದಿಶಾ ಪಟಾನಿ (Disha Patani) ಅವರ ಮನೆ ಎದುರು ಗುಂಡಿನ ದಾಳಿ ನಡೆದಿದೆ. ಶುಕ್ರವಾರ (ಸೆಪ್ಟೆಂಬರ್ 12) ನಸುಕಿನ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ದಿಶಾ ಪಟಾನಿ ಅವರ ಮನೆ ಇದೆ. ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯ ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಗುಂಡಿನ ದಾಳಿ (Firing) ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ. ಸನಾತನ ಧರ್ಮಕ್ಕೆ (Sanatana Dharma) ಅವಮಾನ ಮಾಡಿದ್ದಕ್ಕಾಗಿ ಈ ದಾಳಿ ಮಾಡಲಾಗಿದೆ ಎಂದು ಆ ಪೋಸ್ಟ್​ನಲ್ಲಿ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಜೈ ಶ್ರೀರಾಮ್. ಎಲ್ಲ ಸಹೋದರರಿಗೆ ರಾಮ್ ರಾಮ್. ವೀರೇಂದ್ರ ಚರಣ್, ಮಹೇಂದ್ರ ಸರಣ್ ಆದ ನಾವು ದಿಶಾ ಪಟಾನಿ ಮತ್ತು ಖುಷ್ಬು ಪಟಾನಿ ಮನೆ ಮುಂದೆ ಗುಂಡಿನ ದಾಳಿ ಮಾಡಿದ್ದೇವೆ. ಪ್ರೇಮಾನಂದ್ ಜಿ ಮಹಾರಾಜ್ ಹಾಗೂ ಅನಿರುದ್ದಾಚಾರ್ಯಾಜಿ ಮಹಾರಾಜ್ ಅವರನ್ನು ಆಕೆ ಅವಮಾನಿಸಿದ್ದಾಳೆ. ಆಕೆ ನಮ್ಮ ಸನಾತನ ಧರ್ಮಕ್ಕೆ ಅಗೌರವ ತೋರಲು ಪ್ರಯತ್ನಿಸಿದ್ದಾಳೆ. ನಮ್ಮ ದೇವರಿಗೆ ಮಾಡುವ ಅವಮಾನವನ್ನು ನಾವು ಸಹಿಸಲ್ಲ. ಇದು ಕೇವಲ ಟ್ರೇಲರ್, ಮುಂದಿನ ಬಾರಿ ಆಕೆ ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿದರೆ ಅವರ ಕುಟುಂಬದ ಯಾರೂ ಕೂಡ ಜೀವಂತವಾಗಿ ಉಳಿಯಲ್ಲ’ ಎಂದು ಬೆದರಿಕೆ ಹಾಕಲಾಗಿದೆ.

‘ಈ ಸಂದೇಶ ಆಕೆಗೆ ಮಾತ್ರ ಅಲ್ಲ. ಚಿತ್ರರಂಗದಲ್ಲಿ ಇರುವ ಎಲ್ಲ ಕಲಾವಿದರಿಗೂ ಈ ಎಚ್ಚರಿಕೆ. ನಮ್ಮ ಧರ್ಮ ಮತ್ತು ಸಂತರ ಬಗ್ಗೆ ಭವಿಷ್ಯದಲ್ಲಿ ಯಾರಾದರೂ ಅವಮಾನ ಮಾಡಿದರೆ ಪರಿಣಾಮ ಎದುರಿಸಲು ಸಿದ್ಧವಾಗಿರಿ. ನಮ್ಮ ಧರ್ಮವನ್ನು ರಕ್ಷಿಸಲು ನಾವು ಯಾವುದೇ ಹಂತಕ್ಕೆ ಹೋಗಲು ಸಿದ್ಧವಾಗಿದ್ದೇವೆ. ನಾವು ಹಿಂದೆ ಸರಿಯುವುದಿಲ್ಲ. ನಮಗೆ ಧರ್ಮ ಮತ್ತು ಸಮಾಜ ಒಂದೇ. ಅದನ್ನು ರಕ್ಷಿಸುವುದು ನಮ್ಮ ಮೊದಲ ಕರ್ತವ್ಯ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಗುಂಡಿನ ದಾಳಿಗೆ ಕಾರಣರಾದವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಘಟನೆ ಬಗ್ಗೆ ದಿಶಾ ಪಟಾನಿ ತಂಗಿ ಖುಷ್ಬೂ ಪಟಾನಿ ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಸಂದೇಶ ಹಾಕಿರುವ ಸೋಶಿಯಲ್ ಮೀಡಿಯಾ ಪೋಸ್ಟ್​ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಜಾರಿಯಲ್ಲಿದೆ. ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್​ ಈ ದಾಳಿಯ ಹೊಣೆ ಹೊತ್ತಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಬರುಬರುತ್ತಾ ಉರ್ಫಿ ಜಾವೇದ್ ಆಗ್ತಿದ್ದೀರಿ: ದಿಶಾ ಪಟಾನಿಗೆ ನೆಟ್ಟಿಗರ ಟೀಕೆ

ಈ ಮೊದಲು ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಕೂಡ ಗುಂಡಿನ ದಾಳಿ ನಡೆದಿತ್ತು. ಆ ಬಳಿಕ ಅವರ ಭದ್ರತೆ ಹೆಚ್ಚಿಸಿಕೊಂಡರು. ಹೀಗೆ ಪದೇ ಪದೇ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಯುತ್ತಿರುವುದರಿಂದ ಚಿತ್ರರಂಗದಲ್ಲಿ ಆತಂಕ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.