ಟ್ರೋಲ್​ಗೆ ಮಣಿದ ಆಭರಣ ಸಂಸ್ಥೆ: ಕೃತಿ ಸನನ್ ರಕ್ಷಾ ಬಂಧನ ಜಾಹೀರಾತು ಡಿಲೀಟ್

ಇತ್ತೀಚೆಗೆ ಕೃತಿ ಸನನ್ ಅವರು ನಟಿಸಿದ ಜಾಹೀರಾತು ವಿವಾದಕ್ಕೆ ಕಾರಣ ಆಗಿತ್ತು. ರಕ್ಷಾ ಬಂಧನ ಹಬ್ಬದ ವೇಳೆ ಅವರು ಗ್ಲಾಮರಸ್ ಬಟ್ಟೆ ಧರಿಸಿದ್ದನ್ನು ಜನರು ಟೀಕಿಸಿದ್ದರು. ಕಂಗನಾ ರಣಾವತ್ ಕೂಡ ಟೀಕೆ ಮಾಡಿದ್ದರು. ವಿವಾದ ಜಾಸ್ತಿ ಆಗುತ್ತಿದ್ದಂತೆಯೇ ಆ ಜಾಹೀರಾತನ್ನು ಡಿಲೀಟ್ ಮಾಡಲಾಗಿದೆ.

ಟ್ರೋಲ್​ಗೆ ಮಣಿದ ಆಭರಣ ಸಂಸ್ಥೆ: ಕೃತಿ ಸನನ್ ರಕ್ಷಾ ಬಂಧನ ಜಾಹೀರಾತು ಡಿಲೀಟ್
Kriti Sanon Raksha Bandhan Ad

Updated on: Aug 26, 2026 | 5:08 PM

ಬಾಲಿವುಡ್ ನಟಿ ಕೃತಿ ಸನನ್ ಅಭಿನಯದ ರಕ್ಷಾ ಬಂಧನ (Raksha Bandhan) ಹಬ್ಬದ ಆಭರಣ ಜಾಹೀರಾತು ತೀವ್ರ ವಿವಾದಕ್ಕೆ ಈಡಾದ ಬೆನ್ನಲ್ಲೇ, ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ ‘ಜಿವಾ’ (GIVA) ತನ್ನ ಪ್ರಚಾರದ ವೀಡಿಯೊವನ್ನು ಎಲ್ಲ ಸಾಮಾಜಿಕ ಜಾಲತಾಣಗಳಿಂದ ಹಿಂಪಡೆದು ಅಧಿಕೃತವಾಗಿ ಕ್ಷಮೆಯಾಚಿಸಿದೆ. ಹಬ್ಬದ ವಾತಾವರಣದಲ್ಲಿ ರಕ್ಷಾ ಬಂಧನಕ್ಕಾಗಿ ಜಿವಾ ಸಂಸ್ಥೆಯು ಈ ಜಾಹೀರಾತನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕೃತಿ ಸನನ್ (Kriti Sanon) ಅವರು ಸಾಂಪ್ರದಾಯಿಕ ಸ್ಕರ್ಟ್ ಜೊತೆಗೆ ಬ್ರಾಲೆಟ್ ಶೈಲಿಯ ಟಾಪ್ ಹಾಗೂ ಶೀರ್ ಕೇಪ್ ಧರಿಸಿದ್ದು ವಿವಾದಕ್ಕೆ ಕಾರಣ ಆಗಿತ್ತು.

ಕೃತಿ ಸನನ್ ಅವರು ತಮ್ಮ ಆನ್-ಸ್ಕ್ರೀನ್ ಸಹೋದರನಿಗೆ ರಾಖಿ ಕಟ್ಟುವ ದೃಶ್ಯ ಆ ಜಾಹೀರಾತಿನಲ್ಲಿತ್ತು. ಆದರೆ ಹಬ್ಬದ ಸಂದರ್ಭದಲ್ಲಿ ಇಂತಹ ಉಡುಪು ಧರಿಸಿರುವುದು ಭಾರತೀಯ ಸಂಸ್ಕೃತಿಗೆ ಸೂಕ್ತವಲ್ಲ ಎಂದು ನೆಟ್ಟಿಗರು ಟೀಕಿಸಲು ಪ್ರಾರಂಭಿಸಿದರು. ಸಾಮಾನ್ಯ ಜನರು ಮಾತ್ರವಲ್ಲದೇ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕೂಡ ಈ ಜಾಹೀರಾತನ್ನು ಖಂಡಿಸಿದ್ದರು.

ಸಂಸ್ಥೆಯ ಅಧಿಕೃತ ಸ್ಪಷ್ಟನೆ:

ವಿವಾದ ಬೆಳೆಯುತ್ತಿದ್ದಂತೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಜಿವಾ ಸಂಸ್ಥೆ, ‘ನಾವು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಹಬ್ಬಗಳಿಗೆ ಅತ್ಯಂತ ಉನ್ನತ ಗೌರವ ನೀಡುತ್ತೇವೆ. ಈ ಬಾರಿ ಹಬ್ಬದ ಸಂಭ್ರಮವನ್ನು ಸಾಕುಪ್ರಾಣಿಗಳಿಗೂ ವಿಸ್ತರಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಜಾಹೀರಾತಿನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅದು ಉದ್ದೇಶಪೂರ್ವಕವಲ್ಲ. ಸಮಾಜದ ಭಾವನೆಗಳಿಗೆ ಗೌರವ ನೀಡಿ, ಈ ಜಾಹೀರಾತನ್ನು ಎಲ್ಲ ಮಾಧ್ಯಮಗಳಿಂದ ಹಿಂಪಡೆಯುತ್ತಿದ್ದೇವೆ’ ಎಂದು ತಿಳಿಸಿದೆ.

ಕಂಗನಾ ರಣಾವತ್ ವಾಗ್ದಾಳಿ ಹಾಗೂ ಕೃತಿ ತಿರುಗೇಟು:

ಈ ವಿವಾದಕ್ಕೆ ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯೆ ನೀಡಿದ್ದು, ನೇರವಾಗಿ ಹೆಸರು ಹೇಳದೆ ಜಾಹೀರಾತಿನ ಉಡುಪಿನ ಶೈಲಿಯನ್ನು ಟೀಕಿಸಿ ಅದನ್ನು ‘ಅಸಹ್ಯ’ ಎಂದು ಕರೆದಿದ್ದರು. ಮಹಿಳೆಯರಿಗೆ ಸಾಕಷ್ಟು ಆಯ್ಕೆಗಳು ಇವೆ. ಹೀಗಿರುವಾಗ ಬಿಕಿನಿ ಧರಿಸಿ ರಾಖಿ ಕಟ್ಟಿಸಿಕೊಳ್ಳುವುದು ಯಾಕೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದರು. ಅದಕ್ಕೆ ಕೃತಿ ಸನನ್ ತಿರುಗೇಟು ನೀಡಿದ್ದರು.

‘ಮಹಿಳೆಯರು ಏನು ಧರಿಸಬೇಕು ಎಂದು ನಿರ್ದೇಶಿಸುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಉಡುಪಿನ ಶೈಲಿ ಬದಲಾಗಿರಬಹುದು, ಆದರೆ ಮಹಿಳೆಯ ಸಂಸ್ಕೃತಿಯ ಗೌರವವನ್ನು ಆಕೆಯ ಬಟ್ಟೆಯಿಂದ ಅಳೆಯುವುದು ಸರಿಯಲ್ಲ. ಸಂಸ್ಕೃತಿ ಮತ್ತು ಪರಂಪರೆ ಇರುವುದು ಹೃದಯದಲ್ಲೇ ಹೊರತು ಬ್ಲೌಸ್ ನೆಕ್‌ಲೈನ್‌ನಲ್ಲಲ್ಲ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಕೃತಿ ಸನನ್ ಬರೆದುಕೊಂಡಿದ್ದರು.

ಇದನ್ನೂ ಓದಿ: ‘ಬಿಕಿನಿ, ಒಳಉಡುಪು ಧರಿಸಿ ಸಹೋದರನಿಗೆ ರಾಖಿ ಕಟ್ಟುತ್ತಾರಾ?’: ಕೃತಿ ಸನನ್​ ವಿರುದ್ಧ ಕಂಗನಾ ಗರಂ

ಇದೀಗ ಕಂಪನಿಯು ಜಾಹೀರಾತನ್ನು ಹಿಂಪಡೆದು ಕ್ಷಮೆ ಕೋರಿರುವುದರಿಂದ ಹಬ್ಬದ ಸಂದರ್ಭಗಳಲ್ಲಿ ಮಹಿಳೆಯರ ಉಡುಪು ಮತ್ತು ಆಚರಣೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಹೊಸದೊಂದು ಚರ್ಚೆ ಹುಟ್ಟುಹಾಕಿದೆ. ಜಾಹೀರಾತು ಡಿಲೀಟ್ ಆದ ಬಳಿಕ ಕೃತಿ ಸನನ್ ಅವರು ಯಾವ ರೀತಿ ಸಮರ್ಥನೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us