‘ಪೋಷಕ ನಟರಿಗೆ ಸ್ಟಾರ್ ನಟರ ಬಾಡಿಗಾರ್ಡ್​ಗಳಿಗಿಂತಲೂ ಕಡಿಮೆ ಸಂಬಳ’

|

Updated on: Jun 02, 2024 | 9:46 AM

ಸ್ಟಾರ್ ನಟರು ಸಂಭಾವನೆ ಹೆಚ್ಚಿಸಿಕೊಳ್ಳುತ್ತಿರುವ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ ಅವರ ಸಂಬಳ ಹೆಚ್ಚಾದಷ್ಟು ಉತ್ತಮ ಪೋಷಕ ನಟರ ಸಂಭಾವನೆ ಕಡಿಮೆ ಆಗುತ್ತಿರುತ್ತದೆ. ಸ್ಟಾರ್ ನಟರ ಬಾಡಿಗಾರ್ಡ್​ಗಳಿಗಿಂತಲೂ ಕಡಿಮೆ ಸಂಭಾವನೆಯನ್ನು ಪೋಷಕ ನಟರಿಗೆ ನೀಡಲಾಗುತ್ತದೆ ಎಂದಿದ್ದಾರೆ ನಟರೊಬ್ಬರು.

‘ಪೋಷಕ ನಟರಿಗೆ ಸ್ಟಾರ್ ನಟರ ಬಾಡಿಗಾರ್ಡ್​ಗಳಿಗಿಂತಲೂ ಕಡಿಮೆ ಸಂಬಳ’
Follow us on

ಸಿನಿಮಾ ರಂಗದಲ್ಲಿ ಸಂಭಾವನೆ (Remuneration) ಅಂತರ ಭಾರಿ ದೊಡ್ಡದಾಗಿದೆ. ಸಿನಿಮಾದ ನಾಯಕ ನಟ ಇಡೀ ಸಿನಿಮಾದ ಬಜೆಟ್​ನ ಅರ್ಧದಷ್ಟನ್ನು ಪಡೆಯುತ್ತಾನೆ, ಒಮ್ಮೊಮ್ಮೆ ಸಿನಿಮಾದ ಶೂಟಿಂಗ್ ಇನ್ನಿತರೆ ನಟರ ಸಂಭಾವನೆ, ಪ್ರಚಾರದ ಒಟ್ಟು ಮೊತ್ತದಷ್ಟು ನಾಯಕ ನಟನ ಸಂಭಾವನೆ ಆಗಿರುತ್ತದೆ. ನಾಯಕ ನಟನ ಬಿಟ್ಟು ಇತರರಿಗೆ ಹೆಚ್ಚಿನ ಸಂಭಾವನೆ ಸಿಗುವುದೇ ಇಲ್ಲ. ಚಿತ್ರರಂಗದಲ್ಲಿ ಎಷ್ಟೋ ಮಂದಿ ಪ್ರತಿಭಾವಂತ ನಟರಿದ್ದಾರೆ, ಆದರೆ ಅವರಿಗೆ ಅತ್ಯಂತ ಕಡಿಮೆ ಸಂಭಾವನೆ ಕೊಟ್ಟು ದುಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪೋಷಕ ನಟರು ಮಾತನಾಡುವುದು ಕಡಿಮೆ, ಆದರೆ ಈಗೊಬ್ಬ ಪ್ರತಿಭಾವಂತ ನಟ ಈ ಬಗ್ಗೆ ಮಾತನಾಡಿದ್ದಾರೆ.

ಹೆಸರೇ ಇಲ್ಲದ ಸಣ್ಣ ಪುತ್ರಗಳಲ್ಲಿ ನಟಿಸಿ, ಈಗ ಪ್ರತಿಭಾವಂತ ಪೋಷಕ ನಟ ಎಂದು ಗುರುತಿಸಿಕೊಂಡಿರುವ ಅಭಿಷೇಕ್ ಬ್ಯಾನರ್ಜಿ, ಚಿತ್ರರಂಗದಲ್ಲಿರುವ ವೇಜ್ ಡಿಫರೆನ್ಸ್ (ಸಂಬಳ ತಾರತಮ್ಯ)ದ ಬಗ್ಗೆ ಮಾತನಾಡಿದ್ದಾರೆ. ಒಳ್ಳೆಯ ನಟರನ್ನು ತುಚ್ಛವಾಗಿ ನೋಡಲಾಗುತ್ತದೆ ಎಂಬರ್ಥದಲ್ಲಿ ಮಾತನಾಡಿರುವ ಅಭಿಷೇಕ್, ‘ಸ್ಟಾರ್ ನಟರ ಬಾಡಿಗಾರ್ಡ್​ಗಳಿಗಿಂತಲೂ ಕಡಿಮೆ ಸಂಬಳವನ್ನು ಪೋಷಕ ನಟರಿಗೆ ನೀಡಲಾಗುತ್ತದೆ’ ಎನ್ನುವ ಮೂಲಕ ಚಿತ್ರರಂಗದಲ್ಲಿರುವ ಅಸಮಾನತೆಯನ್ನು ಟೀಕೆ ಮಾಡಿದ್ದಾರೆ.

ಸಿನಿಮಾದ ಬಜೆಟ್​ಗಳು ಹೆಚ್ಚಾದ ಬಗ್ಗೆ ಮಾತನಾಡುತ್ತಾ, ‘ಇದೆಲ್ಲದಕ್ಕೂ ಸ್ಟಾರ್ ನಟರುಗಳೇ ಕಾರಣ. ಇದನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ನಿರ್ಮಾಪಕರು ನಿರ್ಧರಿಸಬೇಕು. ನಾನು ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದಾಗಿನಿಂದಲೂ ಗಮನಿಸುತ್ತಿದ್ದೇನೆ. ಈ ಸ್ಟಾರ್ ನಟರು ಚಿತ್ರ ವಿಚಿತ್ರ ಬೇಡಿಕೆಗಳನ್ನು ನಿರ್ಮಾಪಕರ ಮುಂದೆ ಇಡುತ್ತಾರೆ. ಇದರಿಂದಾಗಿ ಸಿನಿಮಾದ ಬಜೆಟ್ ಹೆಚ್ಚಾಗುತ್ತದೆ ಬೇರೆ ನಟರಿಗೆ ಸರಿಯಾದ ಸಂಭಾವನೆ ಸಿಗುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಸೋಲಿನ ಹೊಡೆತ: ಟೈಗರ್​ ಶ್ರಾಫ್​ ಕೈಯಲ್ಲಿ ಸಿನಿಮಾಗಳೇ ಇಲ್ಲ; ಸಂಭಾವನೆಗೂ ಕತ್ತರಿ

‘ಕಡಿಮೆ ಹಣದಲ್ಲಿ ನಟರನ್ನು ಬುಕ್ ಮಾಡು ಎಂದು ನಿರ್ಮಾಪಕರು ಹೇಳುತ್ತಿದ್ದರು. ಹೌದು, ಸ್ಟಾರ್ ನಟರಿಂದ ಜನ ಸಿನಿಮಾಕ್ಕೆ ಬರುತ್ತಾರೆ, ಚಿತ್ರಮಂದಿರಗಳು ತುಂಬುತ್ತವೆ, ಆದರೆ ಪೋಷಕ ನಟರು ಆ ಸಿನಿಮಾಕ್ಕೆ ಶ್ರಮ ಹಾಕಿದ್ದಾರೆ, ಯೋಗದಾನ ಮಾಡಿರುತ್ತಾರೆ ಅದನ್ನೂ ಗೌರವಿಸಿ. ಸ್ಟಾರ್ ನಟರ ಬಾಡಿಗಾರ್ಡ್​ಗಿಂತಲೂ ಪೋಷಕ ನಟರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಇದು ಸರಿಯಲ್ಲ’ ಎಂದಿದ್ದಾರೆ ಅಭಿಷೇಕ್.

ಅಭಿಷೇಕ್, ಬಾಲಿವುಡ್​ನ ಪ್ರತಿಭಾವಂತ ಪೋಷಕರ ನಟರಲ್ಲಿ ಒಬ್ಬರು. ಪಿಕ್ ಪಾಕೆಟರ್, ಅಂಗಡಿಯವ ಹೀಗೆ ಹೆಸರೇ ಇಲ್ಲದ ಪಾತ್ರಗಳಲ್ಲಿ ನಟಿಸುತ್ತಿದ್ದ ಅಭಿಷೇಕ್​, ಒಂದು ಉತ್ತಮ ಪಾತ್ರಕ್ಕಾಗಿ 20 ವರ್ಷ ಕಾದಿದ್ದರು. ‘ಮಿರ್ಜಾಪುರ್’, ‘ಪಾತಾಲ್ ಲೋಕ್’ ವೆಬ್ ಸರಣಿಗಳಲ್ಲಿ ಅಭಿಷೇಕ್​ರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಅಭಿಷೇಕ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಪೋಷಕ ಪಾತ್ರ, ವಿಲನ್ ಪಾತ್ರಗಳಲ್ಲಿಯೇ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ