ಸೋಲಿನ ಹೊಡೆತ: ಟೈಗರ್ ಶ್ರಾಫ್ ಕೈಯಲ್ಲಿ ಸಿನಿಮಾಗಳೇ ಇಲ್ಲ; ಸಂಭಾವನೆಗೂ ಕತ್ತರಿ
ಟೈಗರ್ ಶ್ರಾಫ್ ಅಭಿನಯದ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿವೆ. ಅದರಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗ ಅವರ ಕೈಯಲ್ಲಿ ಯಾವುದೇ ಸಿನಿಮಾಗಳು ಇಲ್ಲ! ಅವಕಾಶಗಳು ಇಲ್ಲದ ಕಾರಣ ಹೆಚ್ಚಿನ ಸಂಭಾವನೆಯನ್ನೂ ಅವರು ನಿರೀಕ್ಷಿಸುವಂತಿಲ್ಲ. ಪ್ರೇಕ್ಷಕರಿಗೆ ಮತ್ತು ನಿರ್ಮಾಪಕರಿಗೆ ಟೈಗರ್ ಶ್ರಾಫ್ ಮೇಲೆ ಭರವಸೆ ಇಲ್ಲದಂತಾಗಿದೆ.
ನಟ ಟೈಗರ್ ಶ್ರಾಫ್ (Tiger Shroff) ಅವರ ಮೇಲೆ ಬಾಲಿವುಡ್ (Bollywood) ಮಂದಿ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಕಟ್ಟುಮಸ್ತಾದ ದೇಹ ಹೊಂದಿರುವ ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದರು. ಆದರೆ ಕಾಲ ಒಂದೇ ರೀತಿ ಇರುವುದಿಲ್ಲ. ಟೈಗರ್ ಶ್ರಾಪ್ ಪಾಲಿಗೆ ಈಗ ಕಷ್ಟದ ಕಾಲ ಬಂದಿದೆ. ಅವರ ಸಿನಿಮಾಗಳು ಸತತ ಸೋಲು ಕಂಡಿವೆ. ಅದರ ಪರಿಣಾಮವಾಗಿ ಅವರಿಗೆ ಯಾವುದೇ ಆಫರ್ ಸಿಗುತ್ತಿಲ್ಲ. ಅಲ್ಲದೇ, ಸಂಭಾವನೆ (Remuneration) ಕೂಡ ನಿರೀಕ್ಷಿತ ಮಟ್ಟದಲ್ಲಿ ಕೊಡಲು ಯಾವ ನಿರ್ಮಾಪಕರೂ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಈ ವರ್ಷ ತೆರೆಕಂಡಿತು. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಲು ಈ ಸಿನಿಮಾಗೆ ಸಾಧ್ಯವಾಗಲೇ ಇಲ್ಲ. ಅಕ್ಷಯ್ ಕುಮಾರ್ ಅವರಂಥ ಘಟಾನುಘಟಿ ಸ್ಟಾರ್ ನಟ ಜೊತೆಗಿದ್ದರೂ ಕೂಡ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಗಳಿಸಿದ್ದು ಕೇವಲ 58 ಕೋಟಿ ರೂಪಾಯಿ ಮಾತ್ರ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಇಷ್ಟು ಕಡಿಮೆ ಗಳಿಕೆ ಮಾಡಿದ್ದರಿಂದ ನಿರ್ಮಾಪಕರಿಗೆ ನಷ್ಟ ಆಗಿದೆ.
ಇಷ್ಟು ದಿನಗಳ ಕಾಲ ಟೈಗರ್ ಶ್ರಾಫ್ ಅವರು 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಕೇವಲ 9 ಕೋಟಿ ಪಡೆಯುವಂತೆ ನಿರ್ಮಾಪಕರು ಅವರಿಗೆ ಸಲಹೆ ನೀಡಿದ್ದಾರಂತೆ. ನಿರ್ಮಾಪಕರಿಂದ ಈ ಮಾತು ಕೇಳಿಸಿಕೊಂಡು ಟೈಗರ್ ಶ್ರಾಫ್ಗೆ ಖಂಡಿತಾ ಬೇಸರ ಆಗಿದೆ. ಹಾಗಾಗಿ ಅವರು ತಮ್ಮ ವೃತ್ತಿಜೀವನದ ಬಗ್ಗೆ ಗಂಭೀರವಾಗಿ ಆಲೋಚಿಸುವಂತಾಗಿದೆ ಎಂದು ಬಿ-ಟೌನ್ ಗಲ್ಲಿಗಳಲ್ಲಿ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: ಸಿನಿಮಾಕ್ಕೆ ಕೇವಲ 101 ರೂಪಾಯಿ ಸಂಭಾವನೆ ಪಡೆದ ಜನಪ್ರಿಯ ನಟ, ಕಾರಣ?
ಟೈಗರ್ ಶ್ರಾಫ್ ಅವರು ಈವರೆಗೂ ಒಟ್ಟು 11 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ 6 ಸಿನಿಮಾಗಳು ಫ್ಲಾಪ್ ಆಗಿವೆ. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ‘ಹೀರೋಪಂಥಿ 2’, ‘ಗಣಪತ್’, ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿವೆ. ಇದರಿಂದ ನಿರ್ಮಾಪಕರಿಗೆ ಟೈಗರ್ ಶ್ರಾಫ್ ಮೇಲೆ ಇದ್ದ ಭರವಸೆಯೇ ಹೊರಟು ಹೋಗಿದೆ. ಜನರು ಕೂಡ ಟೈಗರ್ ಶ್ರಾಫ್ ನಟನೆಯ ಚಿತ್ರಗಳ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.