ವಿಚ್ಛೇದನಕ್ಕೆ ಅರ್ಜಿ ಹಾಕಿ, ನಂತರ ವಾಪಸ್ ಪಡೆದ ಗೋವಿಂದ ಪತ್ನಿ ಸುನೀತಾ ಅಹುಜಾ
ಹೊಸ ನಟಿ ಕೋಮಲ್ ರಾಣಿ ಜೊತೆ ನಟ ಗೋವಿಂದ ಅವರು ಸುತ್ತಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವೆ ಜಗಳ ಶುರುವಾಗಿದೆ. ಸುನೀತಾ ಅವರು ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರಾದರೂ, ಇದೀಗ ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

ಬಾಲಿವುಡ್ ಹಿರಿಯ ನಟ ಗೋವಿಂದ (Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ ಅವರ ವೈವಾಹಿಕ ಜೀವನದ ಹೈಡ್ರಾಮಾಗೆ ತಾತ್ಕಾಲಿಕವಾಗಿ ತೆರೆಬಿದ್ದಿದೆ. ಸುನೀತಾ ಅಹುಜಾ ಅವರು ಫ್ಯಾಮಿಲಿ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಚ್ಛೇದನ (Divorce) ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ. ಬುಧವಾರ (ಆಗಸ್ಟ್ 19) ಮಗ ಯಶವರ್ಧನ್ ಅಹುಜಾ ಮತ್ತು ವಕೀಲರೊಂದಿಗೆ ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡ ಸುನೀತಾ ಅಹುಜಾ (Sunita Ahuja) ಅವರು ಕಾನೂನು ಪ್ರಕ್ರಿಯೆಯನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಂಡರು ಎಂಬ ಮಾಹಿತಿ ಸಿಕ್ಕಿದೆ.
ಈ ಬೆಳವಣಿಗೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ, ‘ಕೇಸ್ ಹಿಂಪಡೆದಿರುವುದು ಸಂತೋಷದ ವಿಷಯವಾದರೂ, ಈ ವಿಚಾರವನ್ನು ಇಷ್ಟೊಂದು ದೊಡ್ಡದು ಮಾಡುವ ಅಗತ್ಯವಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು, ಈ ಬೆಳವಣಿಗೆಯ ಬಗ್ಗೆ ನಟ ಗೋವಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಿರುವ ಮ್ಯಾನೇಜರ್, ‘ದೇವರು ಎಲ್ಲರಿಗೂ ಸದ್ಬುದ್ಧಿ ನೀಡಲಿ. ಕುಟುಂಬದ ಒಳಗಿನ ಗೊಂದಲಗಳನ್ನು ಕುಳಿತು ಮಾತನಾಡುವ ಮೂಲಕವೇ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.
ಕುಟುಂಬದ ಗೌರವಕ್ಕೆ ಧಕ್ಕೆ:
‘ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅದನ್ನು ಮನೆಯಲ್ಲೇ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕಿತ್ತು. ಸುಮ್ಮನೆ ಕೋರ್ಟ್ ಮೆಟ್ಟಿಲೇರಿ, ಮಾಧ್ಯಮಗಳಲ್ಲಿ ಒಂದೂವರೆಯಿಂದ ಎರಡು ವರ್ಷಗಳ ಕಾಲ ರಂಪಾಟ ಮಾಡಿಕೊಂಡು ಕೊನೆಗೆ ಅರ್ಜಿಯನ್ನು ವಾಪಸ್ ಪಡೆಯುವುದಿದ್ದರೆ, ಮೂಲತಃ ಅರ್ಜಿ ಸಲ್ಲಿಸುವ ಅಗತ್ಯವೇನಿತ್ತು? ಇದರಿಂದ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಮತ್ತು ನಾವೆಲ್ಲರೂ ಸಾರ್ವಜನಿಕವಾಗಿ ತಮಾಷೆಯ ವಸ್ತುವಾಗುವಂತಾಯಿತು’ ಎಂದು ಶಶಿ ಸಿನ್ಹಾ ದುಃಖ ವ್ಯಕ್ತಪಡಿಸಿದ್ದಾರೆ.
ನಟಿ ಜೊತೆ ಗೋವಿಂದ ಸುತ್ತಾಟ:
ಇತ್ತೀಚೆಗೆ ಗೋವಿಂದ ಹಾಗೂ ಅವರ ಹೊಸ ಸಿನಿಮಾ ‘ರೂಪಾ’ ಚಿತ್ರದ ನಟಿ ಕೋಮಲ್ ರಾಣಿ ನಡುವಿನ ಅಫೇರ್ ವದಂತಿಗಳಿಂದಾಗಿ ದಂಪತಿಯ ನಡುವಿನ ಕಿಡಿ ಹೆಚ್ಚಾಗಲು ಪ್ರಮುಖ ಕಾರಣವಾಗಿದ್ದವು. ಗೋವಿಂದ ಮತ್ತು ಕೋಮಲ್ ರಾಣಿ ಏರ್‌ಪೋರ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ, ಸುನೀತಾ ಅಹುಜಾ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಮಗಳ ವಯಸ್ಸಿನ ನಟಿಯೊಂದಿಗೆ ಗೋವಿಂದ ಸುತ್ತಾಡುತ್ತಿದ್ದಾರೆ’ ಎಂದು ಸುನೀತಾ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಮಗಳ ವಯಸ್ಸಿನ ನಟಿ ಜೊತೆ ಗೋವಿಂದ ಸುತ್ತಾಟ; ಕೆಂಡಾಮಂಡಲ ಆದ ಪತ್ನಿ ಸುನೀತಾ
ತಿರುಗೇಟು ನೀಡಿದ್ದ ಗೋವಿಂದ:
ಈ ಆರೋಪಗಳಿಗೆ ವಿಡಿಯೋ ಮೂಲಕವೇ ಗೋವಿಂದ ತಿರುಗೇಟು ನೀಡಿದ್ದರು. ಪತ್ನಿ ಸುನೀತಾ ಅವರು ತಮ್ಮ ಹೆಸರನ್ನು ಹಾಳುಮಾಡಲು ಮತ್ತು ಕಂಬ್ಯಾಕ್ ಸಿನಿಮಾಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ ಎಂದು ಗೋವಿಂದ ಕಿಡಿಕಾರಿದ್ದರು. ‘ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರನ್ನು ಮತ್ತು ಬಡ ಕುಟುಂಬದವರನ್ನು ಈ ರೀತಿ ಸಾರ್ವಜನಿಕವಾಗಿ ಅವಮಾನಿಸಬೇಡಿ. ನಿಮ್ಮ ಮಿತಿಯಲ್ಲಿ ಇರುವುದನ್ನು ಕಲಿಯಿರಿ’ ಎಂದು ಗೋವಿಂದ ಗರಂ ಆಗಿ ಹೆಂಡತಿಗೆ ಎಚ್ಚರಿಕೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




