Hansika Motwani Marriage: ‘ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ ಮದುವೆ; ವೈರಲ್ ಆಗಿದೆ ಫೋಟೋ
Hansika Motwani Sohael Kathuriya: ಡಿಸೆಂಬರ್ 2ರಿಂದಲೇ ಹನ್ಸಿಕಾ ಮೋಟ್ವಾನಿ ಹಾಗೂ ಸೊಹೈಲ್ ಮದುವೆಯ ಶಾಸ್ತ್ರಗಳು ಆರಂಭ ಆಗಿದ್ದವು. ಡಿ.4ರಂದು ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿದೆ.
ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಸೊಹೈಲ್ ಕತುರಿಯಾ (Sohael Kathuriya) ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಭಾನುವಾರ (ಡಿ.4) ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗಿ ಆಗಿದ್ದರು. 450 ವರ್ಷ ಹಳೆಯದಾದ ಜೈಪುರದ ಕೋಟೆಯೊಂದಲ್ಲಿ ಹನ್ಸಿಕಾ ಮೋಟ್ವಾನಿ ಮದುವೆ (Hansika Motwani Wedding) ನೆರವೇರಿದ್ದು, ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್ ಆಗಿವೆ. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ನವ ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಅವರಿಗೆ ಕರುನಾಡಿನಲ್ಲೂ ಫ್ಯಾನ್ಸ್ ಇದ್ದಾರೆ.
ಡಿಸೆಂಬರ್ 2ರಿಂದಲೇ ಹನ್ಸಿಕಾ ಮೋಟ್ವಾನಿ ಹಾಗೂ ಸೊಹೈಲ್ ಮದುವೆಯ ಶಾಸ್ತ್ರಗಳು ಆರಂಭ ಆಗಿದ್ದವು. ಕೆಂಪು ಲೆಹೆಂಗಾ ಮತ್ತು ಅದಕ್ಕೆ ಒಪ್ಪುವ ಆಭರಣೆಗಳನ್ನು ಧರಿಸಿ ಹನ್ಸಿಕಾ ಮಿಂಚಿದ್ದಾರೆ. ಸೊಹೈಲ್ ಅವರು ಶೇರ್ವಾನಿ ಧರಿಸಿದ್ದಾರೆ. ಹನ್ಸಿಕಾ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮದುವೆ ಫೋಟೋಗಳು ವೈರಲ್ ಆಗಿವೆ. ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿರುವ ಹನ್ಸಿಕಾ ಅವರು ಆದಷ್ಟು ಬೇಗ ಕೆಲಸಗಳಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
31ನೇ ವಯಸ್ಸಿಗೆ ಹನ್ಸಿಕಾ ಮೋಟ್ವಾನಿ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಾಲನಟಿಯಾಗಿಯೇ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಹೃತಿಕ್ ರೋಷನ್ ನಟನೆಯ ‘ಕೋಯಿ ಮಿಲ್ ಗಯಾ’ ಸಿನಿಮಾದಲ್ಲಿ ಅವರು ನಟಿಸಿ ಗಮನ ಸೆಳೆದಿದ್ದರು. ಬಳಿಕ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡರು. ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ಅಭಿನಯಿಸಿ ಜನಪ್ರಿಯತೆ ಹೆಚ್ಚಿಸಿಕೊಂಡರು. ಒಟ್ಟು 50 ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಇದೆ.
Happy Married life dear Hansika?? wishing you only happiness in the new phase of your life?
Thank you for giving such master blasters with our Jayamravi ❣️ ? Engeyum kadhal ?Romeo Juliet ?Bhogan#HansikaMotwani #JayamRavi pic.twitter.com/6B6RKmT4gp
— Dhivya Srinivasan (@dhivi_13) December 4, 2022
ಹನ್ಸಿಕಾ ಹಾಗೂ ಸೊಹೈಲ್ ಉತ್ತಮ ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರಿತು. ಈಗ ಅವರ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ. ಇಬ್ಬರೂ ಜೊತೆಯಾಗಿ ಅನೇಕ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ತಮ್ಮಿಬ್ಬರ ಲವ್ ಸ್ಟೋರಿ ಆರಂಭ ಆಗಿದ್ದು ಹೇಗೆ ಎಂಬ ಬಗ್ಗೆ ಹನ್ಸಿಕಾ ಹಾಗೂ ಸೊಹೈಲ್ ಇನ್ನಷ್ಟೇ ವಿವರಣೆ ನೀಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Mon, 5 December 22