ಪ್ರತಿ ಜಾಹಿರಾತಿಗೆ ಕೋಟಿ ಕೋಟಿ ಪಡೆಯುವ ಶಾರುಖ್ ಇದೀಗ ನಿಮ್ಮ ಅಂಗಡಿಗೆ ಉಚಿತವಾಗಿ ಜಾಹಿರಾತು ನೀಡಬಲ್ಲರು; ಹೇಗೆ?

| Updated By: shivaprasad.hs

Updated on: Oct 24, 2021 | 5:56 PM

Shah Rukh Khan: ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಕಾಣಿಸಿಕೊಂಡಿರುವ ದೀಪಾವಳಿಯ ಶುಭ ಕೋರಿರುವ ಜಾಹಿರಾತೊಂದು ಬಿಡುಗಡೆಯಾಗಿದ್ದು, ವೈರಲ್ ಆಗಿದೆ.

ಪ್ರತಿ ಜಾಹಿರಾತಿಗೆ ಕೋಟಿ ಕೋಟಿ ಪಡೆಯುವ ಶಾರುಖ್ ಇದೀಗ ನಿಮ್ಮ ಅಂಗಡಿಗೆ ಉಚಿತವಾಗಿ ಜಾಹಿರಾತು ನೀಡಬಲ್ಲರು; ಹೇಗೆ?
ಶಾರುಖ್ ಖಾನ್
Follow us on

ಬಾಲಿವುಡ್ ನಟ ಶಾರುಖ್ ಖಾನ್ ಅವರ ಬ್ರಾಂಡ್ ಮೌಲ್ಯ ಕೋಟ್ಯಾಂತರ ರೂಗಳಿವೆ. ಅವರು ಒಂದೊಂದು ಜಾಹಿರಾತಿಗೂ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಆದರೆ ಸ್ವಲ್ಪವೂ ಹಣ ಖರ್ಚು ಮಾಡದೇ, ನಿಮ್ಮ ಸಮೀಪದ, ನಿಮ್ಮ ನೆಚ್ಚಿನ ಅಥವಾ ನಿಮ್ಮದೇ ಅಂಗಡಿಯ ರಾಯಭಾರಿಯಾಗಿ ಶಾರುಖ್​ರನ್ನು ನೇಮಿಸಬಹುದು. ಅದೂ ಉಚಿತವಾಗಿ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ. ಪ್ರಸಿದ್ಧ ಚಾಕಲೇಟ್ ಬ್ರಾಂಡ್ ಆಗಿರುವ ‘ಕ್ಯಾಡ್ಬರಿ’ ಸಂಸ್ಥೆ ದೀಪಾವಳಿಗೆ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಅದರಲ್ಲಿ, ಕೊರೊನಾ ಸಂಕಷ್ದ ಸಮಯದಲ್ಲಿ ನಲುಗಿರುವ ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಮಹತ್ತರ ಯೋಜನೆಯನ್ನು ಅದು ಘೋಷಿಸಿದೆ.

ಕ್ಯಾಡ್ಬರಿ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವಿಶೇಷ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ತಿಳಿಸಿರುವಂತೆ, ದೇಶದ ಯಾವುದೇ ಮೂಲೆಯ, ಯಾವುದೇ ಅಂಗಡಿಯವರೂ ಕೂಡ ತಮ್ಮ ಅಂಗಡಿಗೆ, ಬ್ರಾಂಡ್​ಗೆ ಶಾರುಖ್​ರನ್ನು ರಾಯಭಾರಿಯನ್ನಾಗಿಸಬಹುದು. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಕ್ಯಾಡ್ಬರಿ ಇದಕ್ಕೆಂದೇ ಪ್ರತ್ಯೇಕ ವೆಬ್​ಸೈಟನ್ನು ಸೃಷ್ಟಿಸಿದ್ದು, ಅಲ್ಲಿ ಮಾಹಿತಿಗಳನ್ನು ತುಂಬಿದರೆ, ಶಾರುಖ್ ನೀವು ನಮೂದಿಸಿರುವ ಅಂಗಡಿಯ ಕುರಿತು ಜಾಹಿರಾತು ನೀಡುವ ವಿಡಿಯೋ ಲಭ್ಯವಾಗುತ್ತದೆ.

ಇದನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಕ್ಯಾಡ್ಬರಿ ವಿಡಿಯೋವನ್ನೂ ಹಂಚಿಕೊಂಡಿದೆ. ಅದರಲ್ಲಿ ವಿಧಾನಗಳನ್ನೂ ವಿವರಿಸಲಾಗಿದೆ. ‘ಕೇವಲ ಕ್ಯಾಡ್ಬರಿಯ ಜಾಹಿರಾತಲ್ಲ ಇದು’ ಎಂಬ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಜಾಹಿರಾತು, ಸದ್ಯ ವೈರಲ್ ಆಗಿದ್ದು, ಕ್ಯಾಡ್ಬರಿಯ ಉದ್ದೇಶಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕ್ಯಾಡ್ಬರಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

‘ನಮ್ಮ ಸುತ್ತಮುತ್ತಲಿರುವ ಸಣ್ಣ ಸಣ್ಣ ಅಂಗಡಿಗಳೂ ಸಂತಸದ ದೀಪಾವಳಿಯನ್ನು ಆಚರಿಸಬೇಕು’ ಎಂಬ ಆಶಯದಲ್ಲಿ ಮೂಡಿಬಂದಿರುವ ಈ ಜಾಹಿರಾತು ಸದ್ಯ ವೈರಲ್ ಆಗಿದೆ. ಜೊತೆಗೆ ಈ ಹಾಡಿನ ಉದ್ದೇಶಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರು ಮೆಚ್ಚುಗೆ ಸೂಚಿಸಿರುವ ಕೆಲವೊಂದು ಟ್ವೀಟ್​ಗಳು ಇಲ್ಲಿವೆ:

ಶಾರುಖ್ ಅಭಿಮಾನಿಗಳು ಈ ಜಾಹಿರಾತನ್ನು ಬಹಳ ಇಷ್ಟಪಟ್ಟಿದ್ದು, ಶಾರುಖ್ ಹಾಗೂ ಕ್ಯಾಡ್ಬರಿಯ ಪರಿಕಲ್ಪನೆಯನ್ನು ಹೊಗಳಿದ್ದಾರೆ. ಕ್ಯಾಡ್ಬರಿ ಆಧುನಿಕ ತಂತ್ರಜ್ಞಾನದ ಮುಖಾಂತರ ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:

Published On - 5:55 pm, Sun, 24 October 21