‘ಧುರಂದರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

Dhurandhar movie: ರಣ್ವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಭರ್ಜರಿ ಕಲೆಕ್ಷನ್ ಅನ್ನು ಮಾಡುತ್ತಿದೆ. ಅದರ ಜೊತೆಗೆ ಸಿನಿಮಾನಲ್ಲಿ ಪ್ರೊಪೊಗಾಂಡ ಅಂಶಗಳು ಇವೆ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಇದರ ನಡುವೆ ಸ್ಟಾರ್ ನಟ ಹೃತಿಕ್ ರೋಷನ್, ‘ಧುರಂದರ್’ ಸಿನಿಮಾದ ರಾಜಕೀಯ ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

‘ಧುರಂದರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ
Dhurandar Hrithik

Updated on: Dec 11, 2025 | 1:20 PM

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂದರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಆಗಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಏರುತ್ತಲೇ ಸಾಗುತ್ತಿದೆ. ಭಾರತೀಯ ಸೈನಿಕನೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಐಎಸ್​​ಐ ಸೇರಿಕೊಂಡು ಅಲ್ಲಿನ ಮಾಹಿತಿಯನ್ನು ಭಾರತಕ್ಕೆ ವರ್ಗಾಯಿಸುವ ಹಾಗೂ ಐಎಸ್​​ಐನ ಮುಖ್ಯಸ್ಥರುಗಳ ಬಂಧನಕ್ಕೆ, ಸಾವಿಗೆ ಕಾರಣವಾಗುವ ಕತೆಯನ್ನು ‘ಧುರಂದರ್’ ಸಿನಿಮಾ ಒಳಗೊಂಡಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಇದೀಗ ಖ್ಯಾತ ನಟ ಹೃತಿಕ್ ರೋಷನ್, ‘ಧುರಂದರ್’ ಬಗ್ಗೆ ಇನ್ಸ್​ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದು, ‘ಸಿನಿಮಾದ ರಾಜಕೀಯ’ ಇಷ್ಟವಾಗಲಿಲ್ಲ ಎಂದಿದ್ದಾರೆ.

ಸಿನಿಮಾದ ಬಗ್ಗೆ ಇನ್​​ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿರುವ ಹೃತಿಕ್ ರೋಷನ್, ‘ನನಗೆ ಸಿನಿಮಾ ತುಂಬಾ ಇಷ್ಟವಾಯ್ತು, ಸಿನಿಮಾಕ್ಕಾಗಿ ಎಂಥಹಾ ಸಾಹಸ ಬೇಕಾದರೂ ಮಾಡುವ, ಕತೆಯನ್ನು ತಾವಂದುಕೊಂಡಂತೆ ಹೇಳಲು ಪ್ರಯತ್ನ ಮಾಡುವ ವ್ಯಕ್ತಿಗಳೆಂದರೆ ನನಗೆ ಬಹಳ ಪ್ರೀತಿ. ‘ಧುರಂಧರ್’ ನಲ್ಲಿ ಹಾಗೆಯೇ ಆಗಿದೆ. ಅಂಥಹಾ ಅದ್ಭುತ ಸಾಹಸಕ್ಕೆ ಧುರಂಧರ್ ಒಂದು ಉದಾಹರಣೆ. ಕಥೆ ಹೇಳಿರುವ ರೀತಿ ತುಂಬಾ ಇಷ್ಟವಾಯಿತು’ ಎಂದಿದ್ದಾರೆ ಹೃತಿಕ್ ರೋಷನ್.

ಆದರೆ ಹೃತಿಕ್ ಅವರು ಮುಂದಿನ ಸಾಲುಗಳು ಈಗ ಚರ್ಚೆಗೆ ಕಾರಣವಾಗಿವೆ. ‘ಸಿನಿಮಾದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು, ಮತ್ತು ನಾವು ಚಲನಚಿತ್ರ ಕರ್ಮಿಗಳಾಗಿ ವಿಶ್ವದ ನಾಗರಿಕರಾಗಿ ಹೊರಬೇಕಾದ ಜವಾಬ್ದಾರಿಗಳ ಬಗ್ಗೆ ಚರ್ಚಿಸಬಹುದು. ಆದಾಗ್ಯೂ, ನಾನು ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಇದನ್ನು ಹೇಗೆ ಪ್ರೀತಿಸಿದೆ ಮತ್ತು ಕಲಿತಿದ್ದೇನೆ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದೊಂದು ಅದ್ಭುತ ಸಿನಿಮಾ’ ಎಂದಿದ್ದಾರೆ ಹೃತಿಕ್ ರೋಷನ್.

ಇದನ್ನೂ ಓದಿ:‘ಪುಷ್ಪ’ ನಿರ್ದೇಶಕನ ಕೊಂಡಾಡಿದ ಬಾಲಿವುಡ್ ಬೆಡಗಿ ಕೃತಿ ಸನೊನ್

‘ಧುರಂದರ್’ ಸಿನಿಮಾನಲ್ಲಿನ ಕೆಲವು ವಿಷಯಗಳು ರಾಜಕೀಯ ಪಕ್ಷವೊಂದರ ಪರವಾಗಿವೆ, ಒಬ್ಬ ರಾಜಕೀಯ ನಾಯಕರನ್ನು ಹೊಗಳುವ ರೀತಿಯಲ್ಲಿವೆ ಇದು ಸಹ ಪ್ರಪೊಗಾಂಡ ಸಿನಿಮಾ ಎಂಬ ಚರ್ಚೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಹೃತಿಕ್ ರೋಷನ್ ಸಹ ಪರೋಕ್ಷವಾಗಿ ಇದೇ ವಿಷಯದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಸರ್ಕಾರ ಅಸಮರ್ಥ ಸರ್ಕಾರ ಎಂಬ ರೀತಿಯ ಸಂಭಾಷಣೆಗಳು ಸಿನಿಮಾನಲ್ಲಿವೆಯಂತೆ. ‘ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ, ಪಾಕಿಸ್ತಾನ ಎರಡನೇ ಸ್ಥಾನದಲ್ಲಿ ಬರುತ್ತದೆ’ ಎಂಬ ಸಂಭಾಷಣೆ ಸಿನಿಮಾನಲ್ಲಿದೆ. ಅದರ ಜೊತೆಗೆ ‘ಎಷ್ಟು ಸಾಧ್ಯವೋ ಅಷ್ಟು ಸಾಕ್ಷ್ಯ ಸಂಗ್ರಹಿಸು, ಮುಂದೊಂದು ದಿನ ದೇಶದ ಬಗ್ಗೆ ನಿಜವಾದ ಕಾಳಜಿ ಇರುವವರು ಬರಬಹುದು ಆಗ ಬೇಕಾಗುತ್ತದೆ. ನಮ್ಮ ವೇಳೆ ಬರುವವರೆಗೂ ಕಾಯಬೇಕು’ ಎಂಬ ಸಂಭಾಷಣೆ ಸಿನಿಮಾನಲ್ಲಿದೆ. ಈ ಕಾರಣಗಳಿಗಾಗಿ ಸಿನಿಮಾವನ್ನು ಪ್ರೊಪೊಗಾಂಡ ಸಿನಿಮಾ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ