ಹೃತಿಕ್ ರೋಷನ್ (Hritik Roshan) ಹಾಗೂ ದೀಪಿಕಾ ಪಡುಕೋನೆ ನಟನೆಯ ‘ಫೈಟರ್’ ಸಿನಿಮಾ ನಿನ್ನೆಯಷ್ಟೆ (ಜನವರಿ 25) ಬಿಡುಗಡೆ ಆಗಿದೆ. ಭಾರತದ ಮೊದಲ ಏರಿಯಲ್ ಆಕ್ಷನ್ ಸಿನಿಮಾ ಇದಾಗಿದ್ದು, ಭಾರತೀಯ ವಾಯುಸೇನೆಯ ಗರಿಮೆ, ಸಾಹಸದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನ ದೊಡ್ಡ ಮಟ್ಟದ ನಿರೀಕ್ಷೆಯನ್ನು ಈ ಸಿನಿಮಾ ಹುಟ್ಟುಹಾಕಿತ್ತು, ಮೊದಲ ದಿನದ ಗಳಿಕೆಯಲ್ಲಿ ಹೊಸ ದಾಖಲೆಯನ್ನು ಈ ಸಿನಿಮಾ ಸೃಷ್ಟಿಸಲಿದೆ ಎನ್ನಲಾಗುತ್ತು. ಸಿನಿಮಾ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆಯಾದರೂ ನಿರೀಕ್ಷೆಗೆ ತಕ್ಕಷ್ಟು ಅಲ್ಲ.
‘ಫೈಟರ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕಡಿಮೆ ಮೊತ್ತವಲ್ಲದಿದ್ದರೂ ನಿರೀಕ್ಷೆಗೆ ತಕ್ಕಷ್ಟು ಗಳಿಕೆಯನ್ನು ಸಿನಿಮಾ ಮಾಡಿಲ್ಲವೆಂಬ ಅಭಿಪ್ರಾಯವೇ ವ್ಯಕ್ತವಾಗುತ್ತಿದೆ. ಆದರೆ ಜನವರಿ 26ರಿಂದ ಸತತವಾಗಿ ಮೂರು ದಿನ ರಜೆ ಇರುವ ಕಾರಣ ಸಿನಿಮಾದ ಕಲೆಕ್ಷನ್ ಹೆಚ್ಚಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು. ಇದೇ ಕಾರಣಕ್ಕೆ ಸಿನಿಮಾವನ್ನು ಜನವರಿ 25ಕ್ಕೆ ಬಿಡುಗಡೆ ಮಾಡಲಾಗಿದೆ. ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ಗಳಾದ ಪಿವಿಆರ್-ಐನಾಕ್ಸ್ ಹಾಗೂ ಸಿನಿಪೋಲಿಸ್ಗಳಿಗೆ 12 ಕೋಟಿ ಹಣವನ್ನು ಈ ಸಿನಿಮಾ ಗಳಿಸಿದೆ. ಬಾಕಿ ಕಲೆಕ್ಷನ್ ಇತರೆ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಗಳಿಂದ ಆಗಿದೆ.
ಇದನ್ನೂ ಓದಿ:ಹೃತಿಕ್-ದೀಪಿಕಾ ನಟನೆಯ ‘ಫೈಟರ್’ ಹೇಗಿದೆ? ನೆಟ್ಟಿಗರು ಹೇಳಿದ್ದು ಹೀಗೆ…
ಮೊದಲ ದಿನ ನಿರೀಕ್ಷಿತ ಮಟ್ಟದ ಗಳಿಕೆ ಮಾಡಿಲ್ಲವಾದರೂ ಎರಡನೇ ದಿನದ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದ್ದು, ಎರಡನೇ ದಿನ ಅಂದರೆ ಇಂದು (ಜನವರಿ 26) ಸುಮಾರು 35 ರಿಂದ 40 ಕೋಟಿ ಹಣ ಕಲೆಕ್ಷನ್ ಮಾಡುವ ಅಂದಾಜನ್ನು ಕೆಲ ಟ್ರೇಡ್ ಅನಲಿಸ್ಟ್ಗಳು ಮಾಡಿದ್ದಾರೆ. ಒಟ್ಟಾರೆ ಈ ಸಿನಿಮಾ 200 ಕೋಟಿ ಕಲೆಕ್ಷನ್ ಗಡಿಯನ್ನು ದಾಟುವ ವಿಶ್ವಾಸವನ್ನು ಸಹ ವ್ಯಕ್ತಪಡಿಸಲಾಗಿದೆ.
‘ಫೈಟರ್’ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ‘ಜವಾನ್’, ‘ಪಠಾಣ್’ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿಲ್ಲ. ಇದೇ ಕಾರಣಕ್ಕೆ ‘ಫೈಟರ್’ ಸಿನಿಮಾದ ಕಲೆಕ್ಷನ್ ತುಸು ತಗ್ಗಿದಂತೆ ಕಾಣುತ್ತಿದೆ. ಆದರೆ ಹಿಂದಿ ಭಾಗಗಳಲ್ಲಿ ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಸಿನಿಮಾಗಳಲ್ಲಿ ಈ ಭಾಗಗಳಲ್ಲಿ ಗಳಿಕೆ ಹೆಚ್ಚುವ ನಿರೀಕ್ಷೆ ಇದೆ. ಮೊದಲ ದಿನದ ಕಲೆಕ್ಷನ್ಗಿಂತಲೂ ಹೆಚ್ಚಿನ ಕಲೆಕ್ಷನ್ ವೀಕೆಂಡ್ನಲ್ಲಿ ಆಗಲಿದೆ ಎಂಬ ಅಂದಾಜಿದೆ.
‘ಫೈಟರ್’ ಸಿನಿಮಾವನ್ನು ಗಲ್ಫ್ ದೇಶಗಳಲ್ಲಿ (ಯುಎಇ ಹೊರತುಪಡಿಸಿ) ನಿಷೇಧ ಮಾಡಲಾಗಿದ್ದು, ಅಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಾಗಿಲ್ಲ. ಇದು ಸಹ ಸಿನಿಮಾದ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ‘ಜವಾನ್’ ಸಿನಿಮಾ ಗಲ್ಫ್ ದೇಶಗಳಲ್ಲಿಯೇ ಸುಮಾರು 100 ಕೋಟಿ ಗಳಿಕೆ ಮಾಡಿತ್ತು. ಒಂದೊಮ್ಮೆ ಬಿಡುಗಡೆ ಆಗಿದ್ದರೆ ‘ಫೈಟರ್’ ಸಿನಿಮಾ ಸುಮಾರು 30-40 ಕೋಟಿ ಹಣವನ್ನಾದರೂ ಗಲ್ಫ್ ದೇಶಗಳಿಂದ ಗಳಿಸುತ್ತಿತ್ತು, ಆದರೆ ಗಲ್ಫ್ ದೇಶಗಳಲ್ಲಿ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ. ನೆರೆ ರಾಷ್ಟ್ರದ ವಿರುದ್ಧ ದ್ವೇಷ ಹರಡಿಸುವ ಸಂಭಾಷಣೆ ಈ ಸಿನಿಮಾದಲ್ಲಿ ಇರುವ ಕಾರಣದಿಂದ ಸಿನಿಮಾವನ್ನು ಗಲ್ಫ್ ದೇಶಗಳಲ್ಲಿ ನಿಷೇಧ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Fri, 26 January 24