ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮದುವೆ ಆಗಿ ಹಲವು ತಿಂಗಳು ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಇವರು ಸುತ್ತಾಟ ನಡೆಸಿದ್ದಾರೆ. ಇತ್ತೀಚೆಗೆ ಕಿಯಾರಾ ಜನ್ಮದಿನವನ್ನು ಪತಿಯ ಜೊತೆ ಥೈಲ್ಯಾಂಡ್ನಲ್ಲಿ (Thailand) ಆಚರಿಸಿದ್ದರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದಾಂಪತ್ಯ ಜೀವನ ಹೇಗಿದೆ ಎನ್ನುವ ವಿಚಾರದ ಬಗ್ಗೆ ಕಿಯಾರಾ ಮಾತನಾಡಿದ್ದಾರೆ. ಮದುವೆ ಆದ ಬಳಿಕ ಅವರಿಗೆ ಅಡುಗೆ ಮಾಡುವ ಪ್ರಸಂಗವೇ ಎದುರಾಗಿಲ್ಲವಂತೆ! ಅಡುಗೆ ಮಾಡುವ ವಿಚಾರದಲ್ಲಿ ಸಿದ್ದಾರ್ಥ್ ಅವರನ್ನು ಕಿಯಾರಾ ಹಾಡಿ ಹೊಗಳಿದ್ದಾರೆ.
ಕಿಯಾರಾ ಹಾಗೂ ಸಿದ್ದಾರ್ಥ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದವರು. ಈ ವರ್ಷ ಮದುವೆ ಆಗುವ ಮೂಲಕ ತಮ್ಮ ಪ್ರೀತಿಗೆ ಹೊಸ ಅರ್ಥ ನೀಡಿದರು. ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕಿಯಾರಾ ಅವರು ಇತ್ತೀಚೆಗೆ ಎನ್ಡಿಟಿವಿ ನಡೆಸಿದ ಕಾರ್ಯಕ್ರಮ ಒಂದರಲ್ಲಿ ಭಾಗಿ ಆದರು. ಈ ವೇಳೆ ಅವರಿಗೆ ವೈಯಕ್ತಿಕ ಜೀವನದ ಕುರಿತು ಪ್ರಶ್ನೆ ಮಾಡಲಾಗಿದೆ.
‘ಮದುವೆ ಆದ ಬಳಿಕ ನೀವು ಮಾಡಿದ ಮೊದಲ ತಿನಿಸು ಯಾವುದು’ ಎಂದು ಕಿಯಾರಾಗೆ ಕೇಳಲಾಯಿತು. ಇದಕ್ಕೆ ಕಿಯಾರಾ ಅವರು ಉತ್ತರಿಸಿದ್ದಾರೆ. ‘ಇಲ್ಲಿಯವರೆಗೆ ನಾನು ಏನನ್ನೂ ಮಾಡಿಲ್ಲ. ಬಹುಶಃ ನೀರನ್ನು ಬಿಸಿ ಮಾಡಿರಬಹುದು ಅಷ್ಟೇ. ನನ್ನ ಪತಿಗೆ ಅಡುಗೆ ಮಾಡುವುದು ಎಂದರೆ ಇಷ್ಟ. ಅವರು ಯಾವಾಗಲೂ ಏನಾದರೂ ಮಾಡುತ್ತಲೇ ಇರುತ್ತಾರೆ. ನಾನು ಕೂಡ ಅದನ್ನು ತಿಂದು ಎಂಜಾಯ್ ಮಾಡುತ್ತೇನೆ’ ಎಂದಿದ್ದಾರೆ ಕಿಯಾರಾ.
ಸಿದ್ದಾರ್ಥ್ ಅವರು ವಿಶೇಷವಾಗಿ ತಯಾರಿಸುವ ಪದಾರ್ಥ ಯಾವುದು ಎಂದು ಕೇಳಲಾಯಿತು. ಇದಕ್ಕೆ ಕಿಯಾರಾ ‘ಬ್ರೆಡ್’ ಎನ್ನುವ ಉತ್ತರ ನೀಡಿದ್ದಾರೆ. ‘ಸಿದ್ದಾರ್ಥ್ ಅವರು ಬ್ರೆಡ್ನ ಚೆನ್ನಾಗಿ ಮಾಡುತ್ತಾರೆ. ಅದನ್ನು ಮಾಡೋದು ನಿಜಕ್ಕೂ ಕಠಿಣ ಸವಾಲು. ಆದರೆ, ಸಿದ್ದಾರ್ಥ್ ಬ್ರೆಡ್ನ ಚೆನ್ನಾಗಿ ಸಿದ್ಧಪಡಿಸುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ: ಬಿಕಿನಿಯಲ್ಲಿ ಸಮುದ್ರಕ್ಕೆ ಜಿಗಿದು ಬರ್ತ್ಡೇ ಆಚರಿಸಿಕೊಂಡ ನಟಿ ಕಿಯಾರಾ ಅಡ್ವಾಣಿ
ಈ ವರ್ಷ ಫೆಬ್ರವರಿ 7ರಂದು ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ಆದರು. ‘ಶೇರ್ಷಾ’ ಸಿನಿಮಾದ ಬಳಿಕ ಇವರು ಡೇಟಿಂಗ್ ಮಾಡಲು ಆರಂಭಿಸಿದರು ಎನ್ನುವ ಮಾತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ