ಸ್ವಾತಂತ್ರ್ಯ ದಿನದಂದು ಬಿಡುಗಡೆ ಆಗಿ ಇತಿಹಾಸ ಬರೆದ ‘ಶೋಲೆ’ ಸಿನಿಮಾದ ಬಗ್ಗೆ ಆಸಕ್ತಿಕರ ಸಂಗತಿಗಳು
Sholay: 48 ವರ್ಷಗಳ ಹಿಂದೆ ಇದೇ ದಿನ (ಆಗಸ್ಟ್ 15) ಬಿಡುಗಡೆ ಆಗಿದ್ದ ಶೋಲೆ ಸಿನಿಮಾದ ಬಗ್ಗೆ ಹಲವರಿಗೆ ತಿಳಿಯದ ಅಪರೂಪದ ವಿಷಯಗಳು ಇಲ್ಲಿವೆ.
ಭಾರತದ ಈವರೆಗಿನ 100 ಅತ್ಯುತ್ತಮ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಶೋಲೆ‘ (Sholay) ಸಿನಿಮಾಕ್ಕೆ ಆರಂಭದಲ್ಲಿಯೇ ಸ್ಥಾನ ಸಿಗುತ್ತದೆ. ಶೋಲೆ ಸಿನಿಮಾ ಮಾಡಿದ್ದ ಕಮಾಲ್ ಅನ್ನು ಬಾಲಿವುಡ್ನ ಹಿರಿತಲೆಗಳು ಇಂದಿಗೂ ಮರೆತಿಲ್ಲ. ಭಾರತದ ಸಿನಿಮಾ ಇತಿಹಾಸದಲ್ಲಿ ಮರೆಯಲಾಗದ ಸಿನಿಮಾ ಎನಿಸಿಕೊಂಡಿರುವ ‘ಶೋಲೆ’ ಬಿಡುಗಡೆ ಆಗಿ ಇಂದಿಗೆ (ಆಗಸ್ಟ್ 15) 48 ವರ್ಷಗಳಾದವು. ಹಲವು ಅಳಿಸಲಾಗದ ದಾಖಲೆಗಳನ್ನು ಬರೆದ ಈ ಸಿನಿಮಾದ ಬಗೆಗಿನ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.
- ‘ಶೋಲೆ’ ಸಿನಿಮಾದ ಕಾಲ್ಪನಿಕ ಗ್ರಾಮ ರಾಮಘಡ್ನ ನಿರ್ಮಾಣ ಸಿನಿಮಾದ ಚಿತ್ರೀಕರಣ ನಡೆದಿದ್ದು ಕರ್ನಾಟಕದ ರಾಮನಗರದಲ್ಲಿ. ಗಬ್ಬರ್ ಸಿಂಗ್ನ ದೃಶ್ಯಗಳ ಚಿತ್ರೀಕರಣ ನಡೆದ ಬೆಟ್ಟವನ್ನು ಇಂದಿಗೂ ಶೋಲೆ ಬೆಟ್ಟ ಎಂದೇ ಕರೆಯಲಾಗುತ್ತದೆ.
- ‘ಶೋಲೆ’ ಸಿನಿಮಾದ ಕ್ಲೈಮ್ಯಾಕ್ಸ್ ಬೇರೆ ರೀತಿಯಲ್ಲಿಯೇ ಚಿತ್ರೀಕರಣವಾಗಿತ್ತು. ಮೂಲ ಸಿನಿಮಾದಲ್ಲಿ ಠಾಕೂರ್, ಗಬ್ಬರ್ ಸಿಂಗ್ ಅನ್ನು ಕೊಲ್ಲುವಂತೆ ಚಿತ್ರೀಕರಿಸಲಾಗಿತ್ತು, ಆದರೆ ಸೆನ್ಸಾರ್ ಬೋರ್ಡ್ನವರ ಸಲಹೆ ಮೇರೆಗೆ ಮತ್ತೊಮ್ಮೆ ಕ್ಲೈಮ್ಯಾಕ್ಸ್ ಚಿತ್ರೀಕರಿಸಿ ಗಬ್ಬರ್ ಸಿಂಗ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ದೃಶ್ಯ ಬದಲಾಯಿಸಲಾಯ್ತು.
- ‘ಶೋಲೆ’ ಸಿನಿಮಾದ ಚಿತ್ರೀಕರಣ 2 ವರ್ಷ ನಡೆಯಿತು. ಹಲವು ಕಾರಣಗಳಿಗೆ ಸಿನಿಮಾದ ಚಿತ್ರೀಕರಣ ತಡವಾಯ್ತು. ಅದರಲ್ಲಿ ಬಜೆಟ್ ಸಮಸ್ಯೆಯೂ ಒಂದಾಗಿತ್ತು, ಆದರೆ ಬಿಡುಗಡೆ ಆದ ಬಳಿಕ ಯಾವ ಸಿನಿಮಾ ಸಹ ಕಾಣದಂಥಹಾ ಬಾಕ್ಸ್ ಆಫೀಸ್ ಗೆಲುವು ಕಂಡಿತು ಸಿನಿಮಾ.
- ‘ಶೋಲೆ’ ಸಿನಿಮಾದ ಗಬ್ಬರ್ ಸಿಂಗ್ ಪಾತ್ರಕ್ಕೆ ಬೇರೆ ನಟನ ಆಯ್ಕೆ ಆಗಿತ್ತು, ಸಿನಿಮಾದ ಚಿತ್ರಕತೆ ಬರೆದಿದ್ದ ಜಾವೇದ್ ಹಾಗೂ ಸಲ್ಮಾನ್ ಖಾನ್ರ ತಂದೆ ಸಲೀಂ ಅವರಿಗೆ ಅಜ್ಮದ್ ಖಾನ್ ಧ್ವನಿ ಇಷ್ಟವಾಗಿರಲಿಲ್ಲ. ಆದರೆ ನಿರ್ದೇಶಕ ರಮೇಶ್ ಸಿಪ್ಪಿ ನಿರ್ಧಾರದಂತೆ ಅಮ್ಜದ್ ಖಾನ್ಗೆ ಆ ಪಾತ್ರ ದೊರಕಿತು, ಆಮೇಲಿನದ್ದು ಇತಿಹಾಸ.
- 70 ಎಂಎಂನಲ್ಲಿ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ‘ಶೋಲೆ’. 25 ವಾರಗಳ ಸತತ ಪ್ರದರ್ಶನ ಕಂಡ ಭಾರತದ ಮೊದಲ ಸಿನಿಮಾ ಸಹ ‘ಶೋಲೆ’. ಈ ಸಿನಿಮಾ ನೋಡಲು ಪಾಕಿಸ್ತಾನದಿಂದ ರೈಲಿನಲ್ಲಿ ಜನ ಬರುತ್ತಿದ್ದರು. ಒಂದೇ ಚಿತ್ರಮಂದಿರದಲ್ಲಿ ಸತತ ಐದು ವರ್ಷ ಓಡಿದ ಸಿನಿಮಾ ಸಹ ‘ಶೋಲೆ’.
- 1950 ರಲ್ಲಿ ಗ್ವಾಲಿಯರ್ನಲ್ಲಿ ಗಬ್ಬರ್ ಸಿಂಗ್ ಹೆಸರಿನ ನಿಜವಾದ ಡಾಕು ಇದ್ದ. ಆತ ಪೊಲೀಸರ ಕಿವಿ, ಮೂಗು ಕತ್ತರಿಸುತ್ತಿದ್ದನಂತೆ. ಆತನ ಹೆಸರನ್ನೇ ‘ಶೋಲೆ’ ಸಿನಿಮಾದ ವಿಲನ್ಗೆ ಇಡಲಾಯ್ತು. ಸಿನಿಮಾದ ಕತೆ ಬರೆದ ಸಲೀಂ ಹಾಗೂ ಜಾವೇದ್ ತಮ್ಮ ನಿಜ ಜೀವನದ ಗೆಳೆಯರ ಹೆಸರುಗಳನ್ನೇ ಸಿನಿಮಾದ ಹಲವು ಪಾತ್ರಗಳಿಗೆ ಇಟ್ಟಿದ್ದಾರೆ.
- ಹಲವು ಅಂತರಾಷ್ಟ್ರೀಯ ಗೌರವಗಳಿಗೆ ಪಾತ್ರವಾಯ್ತು ‘ಶೋಲೆ’, ಮಿಲೇನಿಯಮ್ನ ಅತ್ಯುತ್ತಮ ಸಿನಿಮಾಗಳು ಎಂಬ ಬಿಬಿಸಿ ತಯಾರಿಸಿದ ಪಟ್ಟಿಯಲ್ಲಿಯೂ ಸ್ಥಾನ ಪಡೆಯಿತು, ಹಲವು ದಾಖಲೆಗಳನ್ನು ಬರೆದ ಈ ಸಿನಿಮಾಕ್ಕೆ ಸಿಕ್ಕಿದ್ದು ಕೇವಲ ಒಂದೇ ಒಂದು ಫಿಲಂಫೇರ್ ಪ್ರಶಸ್ತಿ.
- ಸಿನಿಮಾ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ