Salman Khan: ‘ನಾನು ಸಲ್ಮಾನ್ ಖಾನ್ ಕೊಂದೇ ತೀರುತ್ತೇನೆ’; ಸ್ಟಾರ್ ನಟನಿಗೆ ಮತ್ತೆ ಆತಂಕ

ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು 2011ರಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ರೂಪಿಸಿದ್ದ. ‘ರೆಡಿ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ಕೊಲ್ಲಲು ಪ್ರಯತ್ನ ನಡೆದಿತ್ತು.

Salman Khan: ‘ನಾನು ಸಲ್ಮಾನ್ ಖಾನ್ ಕೊಂದೇ ತೀರುತ್ತೇನೆ’; ಸ್ಟಾರ್ ನಟನಿಗೆ ಮತ್ತೆ ಆತಂಕ
ಸಲ್ಮಾನ್ ಖಾನ್

Updated on: Mar 18, 2023 | 3:08 PM

ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಖಾನ್ (Salman Khan) ಅವರು ಒಂದು ಕಡೆ ಕೋರ್ಟ್​ನಲ್ಲಿ ಕೇಸ್ ಎದುರಿಸುತ್ತಿದ್ದರೆ ಮತ್ತೊಂದು ಕಡೆ ಇದೇ ಪ್ರಕರಣದಿಂದ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಸಲ್ಲುನ ಕೊಲ್ಲಲು ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ನೋಯ್ (Lawrence Bishnoi)​ ಮೊದಲಿನಿಂದಲೂ ಸಂಚು ರೂಪಿಸುತ್ತಲೇ ಇದ್ದಾನೆ. ಈಗ ಸಲ್ಲುನ ಕೊಂದೇ ತೀರುವುದಾಗಿ ಮತ್ತೊಮ್ಮೆ ಹೇಳಿದ್ದಾನೆ. ಈ ಹೇಳಿಕೆಯಿಂದ ಸಲ್ಲುಗೆ ಮತ್ತೆ ಆತಂಕ ಶುರುವಾಗಿದೆ. ಅವರಿಗೆ ಏನೂ ಆಗದಿರಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್​ಗಾಗಿ ಸಲ್ಲು​ ರಾಜಸ್ಥಾನದ ಜೋಧ್‌ಪುರಕ್ಕೆ ಹೋಗಿದ್ದರು. ಸಫಾರಿಗೆ ಹೋದಾಗ ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯದವರು ಪ್ರಕೃತಿ ಆರಾಧಕರು. ವನ್ಯಜೀವಿ ಸಂರಕ್ಷಣೆಗಾಗಿ ಅವರು ಪ್ರಾಣವನ್ನು ಬೇಕಾದರೂ ನೀಡುತ್ತಾರೆ. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ.

ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು 2011ರಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ರೂಪಿಸಿದ್ದ. ‘ರೆಡಿ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ಕೊಲ್ಲಲು ಪ್ರಯತ್ನ ನಡೆದಿತ್ತು. ಆದರೆ, ಈ ಪ್ಲ್ಯಾನ್ ವಿಫಲವಾಗಿತ್ತು. ಈಗ ಸಲ್ಲುನ ಕೊಲೆ ಮಾಡುವುದೇ ಜೀವನದ ಪರಮಗುರಿ ಎಂದು ಹೇಳಿದ್ದಾನೆ.

‘ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು. ಅವರು ಬಿಕಾನೇರ್‌ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿಯೇ ತಪ್ಪಾಯಿತು ಎಂದು ಹೇಳಬೇಕು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ನನ್ನ ಜೀವನದ ಗುರಿ. ಸಲ್ಮಾನ್ ಖಾನ್ ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಅವರನ್ನು ಕೊಲ್ಲುತ್ತೇನೆ’ ಎಂದು ಬಿಷ್ಣೋಯ್ ಎಬಿಪಿ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಒಟ್ಟೂ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಪ್ರಾಪರ್ಟಿ ಬಗ್ಗೆ ಇಲ್ಲಿದೆ ಮಾಹಿತಿ

‘ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಅಲ್ಲಿಗೆ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ. ಮೂಸೆ ವಾಲಾ ಕೂಡ ಹಾಗೇ ಇದ್ದರು. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ’ ಎಂದಿದ್ದಾನೆ ಲಾರೆನ್ಸ್.

ಸಲ್ಮಾನ್ ಖಾನ್ ಅವರ ‘ಕಿಸಿ ಕಾ ಭಾಯ್​ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಟ್ರೋಲ್ ಆಗಿತ್ತು. ‘ಟೈಗರ್ 3’ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು, ಈ ವರ್ಷವೇ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:01 pm, Sat, 18 March 23