ಸದ್ಯಕ್ಕೆ ನಟ ಆಮಿರ್ ಖಾನ್ (Aamir Khan) ಅವರ ಟೈಮ್ ಚೆನ್ನಾಗಿಲ್ಲ ಎನಿಸುತ್ತಿದೆ. ಅವರು ಮಾಡಿದ ಎಲ್ಲ ಪ್ರಯತ್ನಗಳು ಕೈ ಹಿಡಿಯುತ್ತಿಲ್ಲ. ಈ ಹಿಂದೆ ‘ಥಗ್ಸ್ ಆಫ್ ಹಿಂದೂಸ್ತಾನ್’ ಸಿನಿಮಾ ಸೋಲುಂಡಿತು. ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಈ ವರ್ಷ ತೆರೆಕಂಡಿತು. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಹೀನಾಯವಾಗಿ ಸೋತಿದೆ. ಆ ಬಳಿಕ ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಕೂಡ ಮುಲಾಜಿಲ್ಲದೇ ಕೆಲವೊಂದು ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಆಮಿರ್ ಖಾನ್ 100-150 ಕೋಟಿ ರೂಪಾಯಿ ಸಂಭಾವನೆ ಪಡೆಯುವುದು ಒಂದು ಬೋಗಸ್ ಮತ್ತು ಫ್ರಾಡ್ ಒಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತು. ಬಾಲಿವುಡ್ನ ಅನೇಕರ ಬಗ್ಗೆ ಅವರು ನಿಷ್ಠುರವಾಗಿ ಮಾನಾಡಿದ್ದಾರೆ. ಈಗ ಆಮಿರ್ ಖಾನ್ ಅವರನ್ನು ವಿವೇಕ್ ಅಗ್ನಿಹೋತ್ರಿ ಟಾರ್ಗೆಟ್ ಮಾಡಿದ್ದಾರೆ.
ಜನರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಿದ್ದರಿಂದ ಈ ಚಿತ್ರ ಸೋತಿಲ್ಲ ಎಂಬುದು ವಿವೇಕ್ ಅಗ್ನಿಹೋತ್ರಿ ಅವರ ವಾದ. ‘ಆಮಿರ್ ಖಾನ್ ಅವರಿಗೆ ನಿಷ್ಠಾವಂತ ಅಭಿಮಾನಿಗಳು ಇಲ್ಲ. ಹಾಗಿದ್ದ ಮೇಲೆ ಎಲ್ಲವೂ ಬೋಗಸ್ ಮತ್ತು ಫ್ರಾಡ್. ನೀವು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ನೀವು ಯಾಕೆ 100-150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೀರಿ?’ ಎಂದು ವಿವೇಕ್ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಪ್ರಾಮಾಣಿಕತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
‘ಈ ಹಿಂದೆ ‘ದಂಗಲ್’ ಚಿತ್ರ ರಿಲೀಸ್ ಆದಾಗಲೂ ಜನರು ಬಹಿಷ್ಕಾರದ ಮಾತುಗಳನ್ನು ಆಡಿದ್ದರು. ಆದರೂ ಕೂಡ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಯಾಕೆಂದರೆ ಅದರಲ್ಲಿ ಪ್ರಾಮಾಣಿಕತೆ ಇತ್ತು. ತಂದೆಯ ಪಾತ್ರಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದರು. ನಂತರ ತೂಕ ಕಡಿಮೆ ಮಾಡಿಕೊಂಡಿದ್ದರು’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
‘ಭಕ್ತರಿಂದಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತಿತು ಎಂದು ಕೆಲವರು ಹೇಳ್ತಾರೆ. ನರೇಂದ್ರ ಮೋದಿಗೆ ಎಷ್ಟು ಜನ ವೂಟ್ ಮಾಡಬಹುದು. ಶೇಕಡ 40ರಿಂದ ಶೇಕಡ 50ರಷ್ಟು ಇರಬಹುದಾ? ಇನ್ನುಳಿದವರು ಯಾಕೆ ಸಿನಿಮಾವನ್ನು ಗೆಲ್ಲಿಸಲಿಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.