ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಹಾಡು ಸೃಷ್ಟಿ ಮಾಡಿರುವ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ‘ಬೇಷರಂ ರಂಗ್..’ (ನಾಚಿಕೆ ಇಲ್ಲದ ಬಣ್ಣ) ಎಂದು ಹೇಳಿದ್ದೇ ಈ ವಿವಾದ ಹುಟ್ಟಿಕೊಳ್ಳಲು ಕಾರಣ. ಅನೇಕರು ಈ ಸಿನಿಮಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ ಅಯೋಧ್ಯೆಯ ಸ್ವಾಮೀಜಿ (Ayodhya Seer) ಒಬ್ಬರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾರುಖ್ ಖಾನ್ ಅವರನ್ನು ಜೀವಂತವಾಗಿ ಸುಡುತ್ತೇನೆ ಎಂಬುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಕೇಸರಿ ಬಣ್ಣ ಹಿಂದೂಗಳ ಪಾಲಿಗೆ ವಿಶೇಷ. ಆದರೆ, ‘ಬೇಷರಂ ರಂಗ್..’ ಹಾಡಿನಲ್ಲಿ ಈ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಅನೇಕರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಕೆಲವರು ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈಗ ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಈ ಹಾಡಿನ ವಿವಾದದ ಕುರಿತು ಮಾತನಾಡಿದ್ದಾರೆ. ಅವರು ಶಾರುಖ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.
‘ನಮ್ಮ ಸನಾತನ ಧರ್ಮದ ಜನರು ಈ ವಿಚಾರದ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಜಿಹಾದಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ನಾನು ಅವರನ್ನು ಜೀವಂತವಾಗಿ ಸುಡುತ್ತೇನೆ’ ಎಂದು ಪರಮಹಂಸ ಆಚಾರ್ಯ ಎಚ್ಚರಿಸಿದ್ದಾರೆ ಎಂಬುದಾಗಿ ಎಐಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Pathaan 2nd Song: ‘ಪಠಾಣ್’ ಚಿತ್ರದ 2ನೇ ಹಾಡು ಬಿಡುಗಡೆ ಮಾಡಲು ಸಜ್ಜಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ
‘ಪಠಾಣ್ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆದರೆ ನಾನು ಆ ಸಿನಿಮಾ ಮಂದಿರಕ್ಕೆ ಬೆಂಕಿ ಇಡುತ್ತೇನೆ’ ಎಂದು ಕೂಡ ಪರಮಹಂಸ ಆಚಾರ್ಯ ಹೇಳಿದ್ದಾರೆ. ಅವರ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಆಗಿ ಈ ಮಾತನ್ನು ಅವರು ಹೇಳಬಾರದಿತ್ತು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.
ಶಾರುಖ್ ಖಾನ್ ಅವರು ಈ ವಿವಾದದ ಕುರಿತು ಪರೋಕ್ಷವಾಗಿ ಮಾತನಾಡಿದ್ದರು. ‘ಸಂಕುಚಿತ ದೃಷ್ಟಿಕೋನದಿಂದ ಈ ರೀತಿ ಆಗುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾಗೆ ಮಹತ್ವದ ಪಾತ್ರವಿದೆ. ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಖುಷಿಯಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್ ಖಾನ್ ಹೇಳಿದ್ದರು. ‘ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿರುವವರನ್ನು ಉದ್ದೇಶಿಸಿಯೇ ಶಾರುಖ್ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Wed, 21 December 22