ಕಾನ್ನಲ್ಲಿ ಇತಿಹಾಸ ಬರೆದ ನಿರ್ದೇಶಕಿ ಪಾಯಲ್ ಕಪಾಡಿಯಾ
ಕಾನ್ 2024 ಚಿತ್ರೋತ್ಸವದಲ್ಲಿ ಈ ಭಾರತದ ಸಿನಿಮಾಗಳು ಗಮನ ಸೆಳೆಯುತ್ತಿವೆ. ಪಾಯಲ್ ಕಪಾಡಿಯಾ ನಿರ್ದೇಶಿಸಿರುವ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಇತಿಹಾಸವನ್ನೇ ನಿರ್ಮಿಸಿದ್ದು, ಕಾನ್ನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದಿದೆ.
ಕಾನ್ (Cannes) ಫಿಲಂ ಪೆಸ್ಟಿವಲ್ನಲ್ಲಿ ಭಾರತದ ಹಲವಾರು ತಾರೆಯರು ಭಾಗಿಯಾಗಿದ್ದಾರೆ. ಬಹುತೇಕರು ಚಂದದ ಉಡುಗೆಗಳನ್ನು ತೊಟ್ಟು ರೆಡ್ ಕಾರ್ಪೆಟ್ ಮೇಲೆ ನಡೆದು ಕ್ಯಾಮೆರಾಗಳತ್ತ ಕೈ ಬೀಸಿ ಸುದ್ದಿಯಾಗಿದ್ದಾರೆ. ಆದರೆ ಕೆಲವರು ಮಾತ್ರವೇ ತಮ್ಮ ಸಿನಿಮಾಗಳಿಂದ ಸುದ್ದಿಯಾಗಿದ್ದಾರೆ. ಅದರಲ್ಲೂ ನಿರ್ದೇಶಕಿ ಪಾಯಲ್ ಕಪಾಡಿಯಾ ಕಾನ್ 2024 ರಲ್ಲಿ ಇತಿಹಾಸವನ್ನೇ ಬರೆದಿದ್ದಾರೆ. ಅವರ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಕಾನ್ನ ಗ್ರ್ಯಾಂಡ್ನ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ.
30 ವರ್ಷದಲ್ಲಿ ಯಾರೂ ಮಾಡದ ಸಾಧನೆಯನ್ನು ಪಾಯಲ್ ಕಪಾಡಿಯಾ ಮಾಡಿದ್ದಾರೆ. ಕಾನ್ ಸಿನಿಮೋತ್ಸವದಲ್ಲಿ ಈ ವರೆಗೆ ಗ್ರ್ಯಾಂಡ್ನ ಪ್ರಿಕ್ಸ್ ಪ್ರೈಜ್ ಅನ್ನು ಯಾವ ಭಾರತೀಯರೂ ಪಡೆದಿರಲಿಲ್ಲ. ಆದರೆ ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಕಾನ್ನಲ್ಲಿ ಪ್ರದರ್ಶನಗೊಂಡು ಗ್ರ್ಯಾಂಡ್ನ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ ಪಡೆದಿದೆ. ಮಾತ್ರವಲ್ಲದೆ ಸಿನಿಮಾ ಕಾನ್ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿದೆ.
ಗ್ರ್ಯಾಂಡ್ನ ಪ್ರಿಕ್ಸ್ ಪ್ರೈಜ್ ಪ್ರಶಸ್ತಿಯು ಕಾನ್ ಸಿನಿಮೋತ್ಸವದ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ. ಮೊದಲ ಅತ್ಯುತ್ತಮ ಪ್ರಶಸ್ತಿಯಾದ ಪಾಲ್ಮೆ ಡಿಓರ್ ಪ್ರಶಸ್ತಿಯನ್ನು ಅಮೆರಿಕದ ನಿರ್ದೇಶಕ ಸೀನ್ ಬೇಕರ್ ನಿರ್ದೇಶನದ ‘ಅನೋರಾ’ ಸಿನಿಮಾದ ಪಾಲಾಗಿದೆ. ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಗುರುವಾರ ರಾತ್ರಿ ಕಾನ್ನಲ್ಲಿ ಪ್ರದರ್ಶನಗೊಂಡಿತು. 30 ವರ್ಷಗಳಲ್ಲಿ ಕಾನ್ನ ಮುಖ್ಯ ಸಿನಿಮಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ ಮೊದಲ ಭಾರತೀಯ ಸಿನಿಮಾ ಹಾಗೂ ಮೊತ್ತ ಮೊದಲ ಮಹಿಳಾ ನಿರ್ದೇಶಕಿಯ ಸಿನಿಮಾ ಇದೆಂಬ ಖ್ಯಾತಿಗೂ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾ ಪಾತ್ರವಾಯ್ತು.
ಇದನ್ನೂ ಓದಿ:ಕಾನ್ ಸಿನಿಮೋತ್ಸವದಲ್ಲಿ ಕನ್ನಡದ ನಿರ್ದೇಶಕ; ಪ್ರದರ್ಶನ ಕಂಡ ‘ಸನ್ಫ್ಲವರ್’ ಕಿರುಚಿತ್ರ
ಹಾಲಿವುಡ್ ನಟ ವಿಯೋಲಾ ಡೇವಿಸ್ರಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾಯಲ್, ‘ತಮ್ಮ ಸಿನಿಮಾದ ಮೂವರು ಪ್ರಮುಖ ನಟಿಯರಾದ ಕಣಿ ಕಸ್ತೂರಿ, ದಿವ್ಯಾ ಪ್ರಭಾ ಹಾಗೂ ಕಾವ್ಯಾ ಕದಮ್ ಅವರಿಗೆ ಧನ್ಯವಾದ ತಿಳಿಸಿದರು. ಇವರು ಇಲ್ಲದೇ ಹೋಗಿದ್ದರೆ ಸಿನಿಮಾ ಆಗುತ್ತಿರಲಿಲ್ಲವೆಂದರು. ಮತ್ತೊಂದು ಇಂಥಹಾ ಪ್ರಶಸ್ತಿ ಪಡೆಯಲು ಮುಂದಿನ 30 ವರ್ಷಗಳ ವರೆಗೆ ಕಾಯುವುದು ಬೇಡ ಎಂದ ಪಾಯಲ್, ‘ಈ ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ. ಮಹಿಳೆಯರು ಪರಸ್ಪರರ ಬಗ್ಗೆ ಅಸೂಯೆ ಹೊಂದಿರುತ್ತಾರೆ, ನಮ್ಮ ಸಮಾಜದ ವಿನ್ಯಾಸವೇ ಈ ರೀತಿಯಲ್ಲಿದೆ, ಇದು ನಿಜವಾಗಿಯೂ ದುರದೃಷ್ಟಕರ. ಆದರೆ ನನಗೆ, ಸ್ನೇಹವು ಬಹಳ ಮುಖ್ಯವಾದ ಸಂಬಂಧ ಏಕೆಂದರೆ ಅದು ಒಗ್ಗಟ್ಟು, ಒಳಗೊಳ್ಳುವಿಕೆ ಮತ್ತು ಸಹಾನುಭೂತಿಗೆ ಕಾರಣವಾಗುತ್ತದೆ’ ಎಂದಿದ್ದಾರೆ.
‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಕೇರಳದ ಇಬ್ಬರು ನರ್ಸ್ಗಳು ಹಾಗೂ ಒಬ್ಬ ಮುಂಬೈ ನಡು ವಯಸ್ಸಿನ ಮಹಿಳೆಯ ನಡುವಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಕಾನ್ ಇವೆಂಟ್ನ ಬೇರೊಂದು ಸಂದರ್ಶನದಲ್ಲಿ ಮಾತನಾಡಿರುವ ಪಾಯಲ್, ಭಾರತದ ಹಲವು ರಾಜ್ಯಗಳಲ್ಲಿ ಅವರದ್ದೇ ಆದ ಚಿತ್ರರಂಗವಿದೆ, ಹಲವಾರು ಅತ್ಯುತ್ತಮ ತಂತ್ರಜ್ಞರು ಅಲ್ಲಿದ್ದಾರೆ. ವಿದೇಶದಲ್ಲಿ ಭಾರತ ಎಂದರೆ ಬಾಲಿವುಡ್ ಎಂಬ ತಪ್ಪುಕಲ್ಪನೆ ಇದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ