ನಟ ಇರ್ಫಾನ್ ಖಾನ್ (Irrfan Khan) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ನಟಿಸುವ ಮೂಲಕ ಅವರು ಸ್ಟಾರ್ ಕಲಾವಿದ ಎನಿಸಿಕೊಂಡಿದ್ದರು. ಒಂದು ವೇಳೆ ಅವರು ಬದುಕಿದ್ದರೆ ಇಂದು (ಜ.7) 55ನೇ ವರ್ಷದ ಬರ್ತ್ಡೇ ಆಚರಿಸಿಕೊಳ್ಳಬೇಕಿತ್ತು. ಜನ್ಮದಿನದ (Irrfan Khan Birthday) ಪ್ರಯುಕ್ತ ಅವರ ಅತಿ ಮುಖ್ಯ ಸಿನಿಮಾಗಳನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. 2020ರ ಏಪ್ರಿಲ್ 20ರಂದು ಇರ್ಫಾನ್ ಖಾನ್ ಅವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದು ಚಿತ್ರರಂಗದ ಪಾಲಿನ ದೊಡ್ಡ ನಷ್ಟ. ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ನಟಿಸಬೇಕಿತ್ತು. ಮೂರು ದಶಕಗಳ ಸಿನಿಮಾ ಜರ್ನಿಯಲ್ಲಿ ಅಭಿಮಾನಿಗಳು ಸದಾ ನೆನಪಿನಲ್ಲಿ ಇಟ್ಟುಕೊಳ್ಳವಂತಹ ಸಿನಿಮಾಗಳನ್ನು ಕೊಟ್ಟು ಹೋಗಿದ್ದಾರೆ ಇರ್ಫಾನ್ ಖಾನ್.
ಮಕ್ಬೂಲ್ (2003)
ಖ್ಯಾತ ನಿರ್ದೇಶಕ ವಿಶಾಲ್ ಭಾರದ್ವಜ್ ಅವರು ‘ಮಕ್ಬೂಲ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಇರ್ಫಾನ್ ಖಾನ್ ನಟಿಸಿದ್ದರು. ಶೇಕ್ಸ್ಪಿಯರ್ ಬರೆದ ‘ಮ್ಯಾಕ್ಬತ್’ ನಾಟಕವನ್ನು ಆಧರಿಸಿ ಈ ಸಿನಿಮಾ ತಯಾರಾಗಿತ್ತು. ಈ ಸಿನಿಮಾದಿಂದ ಇರ್ಫಾನ್ ಖಾನ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತ್ತು.
ಪಾನ್ ಸಿಂಗ್ ತೋಮರ್ (2012)
ತಿಗ್ಮಾನ್ಶು ಧುಲಿಯಾ ನಿರ್ದೇಶನ ಮಾಡಿದ ‘ಪಾನ್ ಸಿಂಗ್ ತೋಮರ್’ ಸಿನಿಮಾದಲ್ಲಿ ಇರ್ಫಾನ್ ಖಾನ್ ಅವರ ಅಭಿನಯ ಗಮನ ಸೆಳೆಯುತ್ತದೆ. ಈ ಚಿತ್ರದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. 60ನೇ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆಯುವಲ್ಲಿ ಈ ಸಿನಿಮಾ ಯಶಸ್ವಿ ಆಯಿತು.
ತಲ್ವಾರ್ (2015)
2008ರಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಡಬಲ್ ಮರ್ಡರ್ ಕೇಸ್ ಆಧರಿಸಿ ‘ತಲ್ವಾರ್’ ಸಿನಿಮಾ ಮೂಡಿಬಂದಿತ್ತು. ಈ ಚಿತ್ರದಲ್ಲಿ ಇರ್ಫಾನ್ ಖಾನ್ ಅವರು ಸಿಐಡಿ ಅಧಿಕಾರಿ ಪಾತ್ರ ಮಾಡಿದ್ದರು. ಈ ಸಿನಿಮಾಗೆ ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ.
ಹೈದರ್ (2014)
2014ರಲ್ಲಿ ತೆರೆಕಂಡ ಹೈದರ್ ಚಿತ್ರಕ್ಕೆ ವಿಶಾಲ್ ಭಾರದ್ವಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇರ್ಫಾನ್ ಖಾನ್ ಅವರದ್ದು ಅತಿಥಿ ಪಾತ್ರ. ಹಾಗಿದ್ದರೂ ಕೂಡ ಅವರು ತಮ್ಮ ನಟನೆಯಿಂದ ಗಮನ ಸೆಳೆದರು. ವಿಲಿಯಮ್ ಶೇಕ್ಸ್ಪಿಯರ್ ಬರೆದ ‘ಹ್ಯಾಮ್ಲೆಟ್’ ನಾಟಕ ಆಧರಿಸಿ ಈ ಸಿನಿಮಾ ತಯಾರಾಗಿತ್ತು.
ಲೈಫ್ ಆಫ್ ಪೈ (2012)
ಇರ್ಫಾನ್ ಖಾನ್ ನಟಿಸಿದ ಹಲವು ಇಂಗ್ಲಿಷ್ ಸಿನಿಮಾಗಳಲ್ಲಿ ‘ಲೈಫ್ ಆಫ್ ಪೈ’ ಕೂಡ ಪ್ರಮುಖವಾದದ್ದು. ಇದರಲ್ಲಿ ಇರ್ಫಾನ್ ಖಾನ್ ಮಹತ್ವದ ಪಾತ್ರ ನಿಭಾಯಿಸಿದ್ದರು. ಇಂಥ ಹಲವಾರು ಸಿನಿಮಾಗಳನ್ನು ನೀಡಿದ ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ.
ಇದನ್ನೂ ಓದಿ:
ನಟ ಇರ್ಫಾನ್ ಖಾನ್ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!
ತಂದೆಯ ಬಟ್ಟೆಯನ್ನೇ ತೊಟ್ಟು ಫಿಲ್ಮ್ ಫೇರ್ ಸ್ವೀಕರಿಸಿದ ಇರ್ಫಾನ್ ಖಾನ್ ಪುತ್ರ