ಸಲ್ಮಾನ್ ಖಾನ್ (Salman Khan) ಅವರ ಸಿನಿಮಾ ರಿಲೀಸ್ ಆಗುವಾಗ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಈ ವರ್ಷ ದೀಪಾವಳಿ ಪ್ರಯುಕ್ತ ನವೆಂಬರ್ 12ರಂದು ‘ಟೈಗರ್ 3’ (Tiger 3) ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಆಗಿದೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಅಚ್ಚರಿಯ ಸಂಗತಿ ಏನೆಂದರೆ, ನಟ ಹೃತಿಕ್ ರೋಷನ್ (Hrithik Roshan) ಸಹ ‘ಟೈಗರ್ 3’ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವೇ ಹೌದಾದರೆ ಅಭಿಮಾನಿಗಳ ಪಾಲಿಗೆ ಭರ್ಜರಿ ಮನರಂಜನೆ ಸಿಗಲಿದೆ.
‘ಟೈಗರ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರು ಜೋಡಿಯಾಗಿ ನಟಿಸಿದ್ದಾರೆ. ಸಲ್ಮಾನ್ ಮಾತ್ರವಲ್ಲದೇ ಕತ್ರಿನಾ ಕೈಫ್ ಕೂಡ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಝಲಕ್ ತೋರಿಸುವಂತಹ ಪೋಸ್ಟರ್ಗಳು ಈಗಾಗಲೇ ವೈರಲ್ ಆಗಿವೆ. ಪಠಾಣ್ ಪಾತ್ರದಲ್ಲಿ ಶಾರುಖ್ ಖಾನ್ ಅವರು ಗೆಸ್ಟ್ ಅಪಿಯರೆನ್ಸ್ ನೀಡಲಿದ್ದಾರೆ. ಇದರ ಜೊತೆ ಹೃತಿಕ್ ರೋಷನ್ ಕೂಡ ಇರಲಿದ್ದಾರೆ ಎಂದು ‘ಪಿಂಕ್ ವಿಲ್ಲಾ’ ವರದಿ ಮಾಡಿದೆ. ಇದರ ಬಗ್ಗೆ ಚಿತ್ರತಂಡದವರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೂ ಗಾಸಿಪ್ ಬಲವಾಗಿದೆ.
ಇದನ್ನೂ ಓದಿ: Tiger 3: ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ; ಸಿನಿಮಾ ಅವಧಿ ಬಗ್ಗೆ ಇಲ್ಲಿದೆ ಮಾಹಿತಿ
‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಮೂಲಕ ‘ವಾರ್’, ‘ಏಕ್ ಥ ಟೈಗರ್’, ‘ಟೈಗರ್ ಜಿಂದಾ ಹೈ’, ‘ಪಠಾಣ್’, ‘ಟೈಗರ್ 3’ ಸಿನಿಮಾಗಳು ಮೂಡಿಬಂದಿವೆ. ಈ ಎಲ್ಲ ಸಿನಿಮಾಗಳ ಕಥೆಗೆ ಒಂದಕ್ಕೊಂದು ಲಿಂಕ್ ಇಡಲಾಗಿದೆ. ಆ ಮೂಲಕ ‘ವೈಆರ್ಎಸ್ ಸ್ಪೈ ಯೂನಿವರ್ಸ್’ ಸೃಷ್ಟಿಸಲಾಗಿದೆ. ‘ವಾರ್’ ಸಿನಿಮಾದಲ್ಲಿ ಹೃತಿಕ್ ರೋಷನ್ ಮಾಡಿದ್ದ ಕಬೀರ್ ಎಂಬ ಪಾತ್ರವು ‘ಟೈಗರ್ 3’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ: ಕಲರ್ಫುಲ್ ಬಟ್ಟೆ ಧರಿಸಿ ‘ಟೈಗರ್ 3’ ಸಿನಿಮಾದ ರಂಗು ಹೆಚ್ಚಿಸಿದ ಕತ್ರಿನಾ ಕೈಫ್
ಮನೀಶ್ ಶರ್ಮಾ ಅವರು ‘ಟೈಗರ್ 3’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಟ್ರೇಲರ್ ನೋಡಿದ ಎಲ್ಲರೂ ವಾವ್ ಎಂದಿದ್ದಾರೆ. ಈ ಸಿನಿಮಾದಲ್ಲಿ ಇಮ್ರಾನ್ ಹಷ್ಮಿ ಅವರು ವಿಲನ್ ಆಗಿ ನಟಿಸಿರುವುದು ಕೂಡ ವಿಶೇಷ. ಶುಕ್ರವಾರದ ಬದಲು ಈ ಸಿನಿಮಾ ಭಾನುವಾರ (ನ.12) ಬಿಡುಗಡೆ ಆಗಲಿದೆ. ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಭರ್ಜರಿ ಓಪನಿಂಗ್ ಪಡೆಯುವ ಸೂಚನೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.