ಸುಕೇಶ್ ಚಂದ್ರಶೇಖರ್ (Sukesh Chandrashekhar) ನಡೆಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ಸೇರಿಕೊಂಡಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣ ಇದಾಗಿದ್ದು, ಇದಕ್ಕೂ ಜಾಕ್ವೆಲಿನ್ಗೂ ನಂಟಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಾಕ್ಷಿ ಸಿಕ್ಕಿದೆ. ಈ ಕಾರಣಕ್ಕೆ ಚಾರ್ಜ್ಶೀಟ್ನಲ್ಲಿ ಜಾಕ್ವೆಲಿನ್ (Jacqueline Fernandez) ಅವರನ್ನು ಆರೋಪಿ ಎಂದು ಇಡಿ ಹೆಸರಿಸಿದೆ. ಇದರಿಂದ ನಟಿಗೆ ಸಂಕಷ್ಟ ಹೆಚ್ಚಿದೆ. ಈ ಮಧ್ಯೆ ಇಡಿ ಅಧಿಕಾರಿಗಳು ಶಾಕಿಂಗ್ ವಿಚಾರ ಒಂದನ್ನು ರಿವೀಲ್ ಮಾಡಿದ್ದಾರೆ. ಸುಕೇಶ್ ನಡೆಸುತ್ತಿದ್ದ ಈ ಅಕ್ರಮಗಳ ಬಗ್ಗೆ ನಟಿಗೆ ತಿಳಿದಿತ್ತು ಎಂಬ ಮಾಹಿತಿ ಬಹಿರಂಗ ಆಗಿದೆ.
ಸುಕೇಶ್ ಬಂಧನದ ನಂತರದಲ್ಲಿ ಜಾಕ್ವೆಲಿನ್ ಹೆಸರು ರಿವೀಲ್ ಆಯಿತು. ‘ಸುಕೇಶ್ ಚಂದ್ರಶೇಖರ್ ಪರಿಚಯ ಇದೆ. ಆದರೆ, ಅವರು ನಡೆಸುತ್ತಿದ್ದ ಈ ಅಕ್ರಮಗಳ ಬಗ್ಗೆ ನನಗೆ ತಿಳಿದಿರಲಿಲ್ಲ’ ಎಂದು ಜಾಕ್ವೆಲಿನ್ ಹೇಳಿದ್ದರು. ಆದರೆ, ಇದು ಸುಳ್ಳು ಎಂಬುದನ್ನು ಜಾರಿನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಜಾಕ್ವೆಲಿನ್ಗೆ ಎದುರಾಗಿದ್ದ ಸಂಕಷ್ಟ ಮತ್ತಷ್ಟು ಹೆಚ್ಚಿದೆ.
‘ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಜಾಕ್ವೆಲಿನ್ಗೆ ತಿಳಿದಿತ್ತು. ಆದಾಗ್ಯೂ ಅವರು ಸುಕೇಶ್ನಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ಜಾಕ್ವೆಲಿನ್ ಅವರ ಕೇಶ ವಿನ್ಯಾಸಕ ಶಾನ್ ಅವರು ಸುಕೇಶ್ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಜಾಕ್ವೆಲಿನ್ ಅವರು ಈ ವಿಚಾರವನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಸುಕೇಶ್ ಜತೆ ರಿಲೇಶನ್ಶಿಪ್ ಮುಂದುವರಿಸಿದ್ದರು’ ಎಂದು ಇಡಿ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದೆ.
ಸುಕೇಶ್ ಚಂದ್ರಶೇಖರ್ ಹಲವು ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಆತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಜಾಕ್ವೆಲಿನ್ ಹೆಸರನ್ನು ಆತ ರಿವೀಲ್ ಮಾಡಿದ್ದ. ಅಷ್ಟೇ ಅಲ್ಲದೆ ಜಾಕ್ವೆಲಿನ್ ಹಾಗು ತಾನು ಒಟ್ಟಾಗಿ ಕಳೆದ ಖಾಸಗಿ ಫೋಟೋಗಳನ್ನು ಲೀಕ್ ಮಾಡಿಸಿದ್ದ. ಈ ಫೋಟೋಗಳು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.
ಇದನ್ನೂ ಓದಿ: ಸಂಕಷ್ಟ ಪರಿಹಾರಕ್ಕೆ ಕೋರಿ ದೇವರ ಮೊರೆ ಹೋದ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಇತ್ತೀಚೆಗೆ ತೆರೆಗೆ ಬಂದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಒಂದು ಪಾತ್ರ ಮಾಡಿದ್ದರು. ಅವರು ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ’ ಹಾಡು ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಹಾಡಿನಿಂದ ಸಿನಿಮಾದ ಮೈಲೇಜ್ ಹೆಚ್ಚಿತ್ತು. ಜಾಕ್ವೆಲಿನ್ ಅವರ ಡ್ಯಾನ್ಸ್ ನೋಡಿ ಪಡ್ಡೆಗಳು ಕಣ್ಣರಳಿಸಿದ್ದರು.
Published On - 10:00 pm, Wed, 31 August 22