ಸಿನಿಮಾ (Cinema) ನಟ-ನಟಿಯರು ಎಲ್ಲಿ ಹೋದರೂ ಬೆನ್ನತ್ತಿ ಚಿತ್ರಗಳನ್ನು ತೆಗೆಯುವ ಪಾಪರಾಟ್ಜಿಗಳು ಬಾಲಿವುಡ್ನ ಭಾಗವಾಗಿಬಿಟ್ಟಿದ್ದಾರೆ. ಸಿನಿಮಾ ನಟ-ನಟಿಯರು ಏರ್ಪೋರ್ಟ್ಗೆ ಹೋಗಲಿ, ಜಿಮ್ಗೆ ಹೋಗಲಿ, ಪಾರ್ಟಿಗಳಿಗೆ ಹೋಗಲಿ, ಶೂಟಿಂಗ್, ಇವೆಂಟ್ ಎಲ್ಲೇ ಹೋದರು ಬೆನ್ನು ಹತ್ತಿ ಚಿತ್ರಗಳನ್ನು ತೆಗೆಯುತ್ತಾರೆ. ಗಮನಿಸಬೇಕಾದ ವಿಷಯವೆಂದರೆ ನಟ-ನಟಿಯರು ಎಲ್ಲಿ ಹೋಗುತ್ತಿದ್ದಾರೆಂಬುದು ಇವರಿಗೆ ಹೇಗೆ ಗೊತ್ತಾಗುತ್ತದೆ? ಮತ್ತು ಚಿತ್ರಗಳನ್ನು ತೆಗೆಯುವುದರಿಂದ ಇವರಿಗೆ ಏನು ಲಾಭ? ಪಾಪರಾಟ್ಜಿಗಳ ನೆಚ್ಚಿನ ನಟಿಯರಲ್ಲಿ ಒಬ್ಬರಾದ ಜಾನ್ಹವಿ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ.
‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಜಾನ್ಹವಿ ಕಪೂರ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪಾಪರಾಟ್ಜಿಗಳ ನಿಜ ಮುಖ ಬಯಲು ಮಾಡಿದ್ದಾರೆ. ಅಸಲಿಗೆ ಪಾಪರಾಟ್ಜಿಗಳನ್ನು ಹಣ ಕೊಟ್ಟು ಕರೆಸಲಾಗುತ್ತದೆಯಂತೆ. ಅವರು ಒಂದು ಚಿತ್ರಕ್ಕೆ ಇಷ್ಟೆಂದು ಚಾರ್ಜ್ ಸಹ ಮಾಡುತ್ತಾರಂತೆ. ಬಹಳ ವಿಶೇಷ ಸಂದರ್ಭಗಳಿದ್ದರೆ ಪಾಪರಾಟ್ಜಿಗಳೇ ನಟ-ನಟಿಯರನ್ನು ಹುಡುಕಿ ಬರುತ್ತಾರೆ, ಕಾರು ಫಾಲೋ ಮಾಡಿಕೊಂಡು ಬರುತ್ತಾರೆ. ಆದರೆ ಸಿನಿಮಾ ಪ್ರಚಾರ ಇತ್ಯಾದಿಗಳಿದ್ದರೆ ಹಣ ಕೊಟ್ಟು ಅವರನ್ನು ಕರೆಸಬೇಕಾಗುತ್ತದೆ ಎಂದಿದ್ದಾರೆ.
‘ಈಗ, ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದ ಪ್ರಚಾರ ನಡೆಯುತ್ತಿದೆ. ಹಾಗಾಗಿ ನನ್ನ ಚಿತ್ರವನ್ನು ಕ್ಲಿಕ್ ಮಾಡಲು ಅವರನ್ನು ವಿಮಾನ ನಿಲ್ದಾಣಕ್ಕೆ ಕರೆಸಲಾಗಿರುತ್ತದೆ. ಆದರೆ ಚಿತ್ರದ ಪ್ರಚಾರ ಇಲ್ಲದಿದ್ದಾಗ. ನಾನು ಚಿತ್ರೀಕರಣಕ್ಕೆ ಹೋಗದಿದ್ದಾಗ, ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿರುವಾಗ, ಅವರಿಗೆ ನನ್ನ ಚಿತ್ರ ಬೇಕೆನಿಸದರೆ ಅಥವಾ ಯಾರಾದರೂ ನನ್ನ ಚಿತ್ರ ತೆಗೆದುಕೊಡುವಂತೆ ಕೇಳಿದಾಗ ಅವರು ನನ್ನ ಕಾರು ಹಿಂಬಾಲಿಸಿಕೊಂಡು ಬರುತ್ತಾರೆ. ಕಷ್ಟಪಟ್ಟು ನನ್ನ ಚಿತ್ರಗಳನ್ನು ತೆಗೆಯುತ್ತಾರೆ. ಏಕೆಂದರೆ ಪ್ರತಿ ಚಿತ್ರಕ್ಕೆ ಇಷ್ಟೆಂದು ಅವರು ಹಣ ಪಡೆಯುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ:ಶ್ರೀಲೀಲಾ ಕೈಬಿಟ್ಟ ದೊಡ್ಡ ಅವಕಾಶ ಜಾನ್ಹವಿ ಕಪೂರ್ ಪಾಲಾಯ್ತು
‘ಬಾಲಿವುಡ್ನ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ನಟ-ನಟಿ ಆಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತವೆ. ನಿಮ್ಮ ಬೆಲೆ ಹೆಚ್ಚಿದ್ದರೆ, ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ, ನಿಮ್ಮ ಕಾರನ್ನು ಹಿಂಬಾಲಿಸುತ್ತಾರೆ. ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಕರೆ ಮಾಡಿ ಅವರನ್ನು ಕರೆಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವವರ ಸಂಖ್ಯೆಯೂ ಬಾಲಿವುಡ್ನಲ್ಲಿ ಹೆಚ್ಚೇ ಇದೆ’ ಎಂದಿದ್ದಾರೆ.
ಈ ಹಿಂದೆ ದಕ್ಷಿಣ ಭಾರತದ ನಟಿ ಪ್ರಿಯಾಮಣಿ ಸಹ ಈ ಬಗ್ಗೆ ಮಾತನಾಡಿದ್ದರು. ಅವರೂ ಸಹ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಅಲ್ಲಿನ ಪಾಪರಾಟ್ಜಿ ಕಲ್ಚರ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಟ-ನಟಿಯರೇ ಪಾಪರಾಟ್ಜಿಗಳನ್ನು ಹಣ ಕೊಟ್ಟು ಕರೆಸಿ, ತಮ್ಮ ಫೋಟೊಗಳನ್ನು ಕ್ಲಿಕ್ ಮಾಡುವಂತೆ ಸೂಚಿಸಿರುತ್ತಾರೆ. ಪಾಪರಾಟ್ಜಿಗಳು ಫೋಟೊ ಕ್ಲಿಕ್ ಮಾಡುವಾಗ ತಮಗಾಗಿ ಅವರೇ ಕಾಯುತ್ತಿದ್ದರೇನೋ ಎಂಬಂತೆ ಫೋಸು ಕೊಡುತ್ತಾರೆ’ ಎಂದಿದ್ದರು. ಈಗ ಜಾನ್ಹವಿ ಕಪೂರ್ ಸಹ ಅದೇ ವಿಷಯವನ್ನು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ