
ತುಂಬಾ ವೇಗವಾಗಿ ಸಿನಿಮಾ ಕೆಲಸಗಳನ್ನು ಮುಗಿಸುವುದರಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಬೇರೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ. ಪ್ರತಿ ವರ್ಷ ಅವರ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. 2025ರಲ್ಲಿ ಈಗಾಗಲೇ ‘ಸ್ಕೈ ಫೋರ್ಸ್’, ‘ಕೇಸರಿ: ಚಾಪ್ಟರ್ 2’, ‘ಹೌಸ್ಫುಲ್ 5’ ಸಿನಿಮಾಗಳು ತೆರೆಕಂಡಿವೆ. ಈಗ ಅಕ್ಷಯ್ ಕುಮಾರ್ ನಟಿಸಿರುವ ಇನ್ನೊಂದು ಸಿನಿಮಾ ‘ಜಾಲಿ ಎಲ್ಎಲ್ಬಿ 3’ (Jolly LLB 3) ಕೂಡ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಗುಟ್ಕಾ (Gutka) ಕುರಿತು ಎದುರಾದ ಪ್ರಶ್ನೆಗೆ ಅಕ್ಷಯ್ ಕುಮಾರ್ ಅವರು ಉತ್ತರ ನೀಡಿದರು.
ಅಕ್ಷಯ್ ಕುಮಾರ್ ಅವರು ಈ ಮೊದಲು ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ಸಿನಿಮಾದಲ್ಲಿ ಒಳ್ಳೆಯ ಸಂದೇಶ ನೀಡುವ ಅಕ್ಷಯ್ ಕುಮಾರ್ ಅವರು ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿಯಲ್ಲ ಎಂಬುದು ಜನರ ವಾದ ಆಗಿತ್ತು. ರಿಯಲ್ ಲೈಫ್ನಲ್ಲಿ ಅಕ್ಷಯ್ ಕುಮಾರ್ ಅವರು ಬಹಳ ಶಿಸ್ತಿನ ವ್ಯಕ್ತಿ. ಅಂಥವರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಅಕ್ಷಯ್ ಕುಮಾರ್ ಅವರಿಗೆ ಹಲವು ಬಾರಿ ಪ್ರಶ್ನೆ ಎದುರಾಗಿದೆ.
‘ಜಾಲಿ ಎಲ್ಎಲ್ಬಿ 3’ ಸಿನಿಮಾದ ಟ್ರೇಲರ್ ಲಾಂಚ್ ವೇಳೆ ಪತ್ರಕರ್ತರೊಬ್ಬರು ಗುಟ್ಕಾ ಕುರಿತು ಪ್ರಸ್ತಾಪ ಮಾಡಿದರು. ಆ ಪ್ರಶ್ನೆಯನ್ನು ಬೆಳೆಸಲು ಅಕ್ಷಯ್ ಕುಮಾರ್ ಅವರಿಗೆ ಇಷ್ಟ ಇರಲಿಲ್ಲ. ‘ಗುಟ್ಕಾ ತಿನ್ನಬಾರದು’ ಎಂದು ಅವರು ಉತ್ತರ ನೀಡಿದರು. ಪತ್ರಕರ್ತರು ಮತ್ತೆ ಅದೇ ವಿಚಾರದ ಬಗ್ಗೆ ಕೆದಕಲು ಶುರು ಮಾಡಿದಾಗ, ‘ಸಂದರ್ಶನ ನನ್ನದಾ ಅಥವಾ ನಿಮ್ಮದಾ? ನಾನು ಹೇಳುತ್ತಿದ್ದೇನೆ.. ಗುಟ್ಕಾ ತಿನ್ನುವುದು ಕೆಟ್ಟದ್ದು. ಮುಂದಿನ ಪ್ರಶ್ನೆ ಕೇಳಿ’ ಎಂದು ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದರು.
ಒಂದು ಬಾರಿ ಗುಟ್ಕಾ ಜಾಹೀರಾತಿನಲ್ಲಿ ಅಭಿನಯಿಸಿದ್ದಕ್ಕಾಗಿ ಅಕ್ಷಯ್ ಕುಮಾರ್ ಅವರು ಪದೇ ಪದೇ ಟೀಕೆಗೆ ಒಳಗಾಗಬೇಕಾಗಿದೆ. ಆದರೆ ಈ ಬಾರಿ ಅವರು ತಮ್ಮ ಕಡೆಗೆ ತೂರಿಬಂದ ಪ್ರಶ್ನೆಯನ್ನು ನಾಜೂಕಾಗಿ ತಳ್ಳಿಹಾಕಿದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅತ್ತೆಯ ಒತ್ತಾಯಕ್ಕೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ಇದ್ದ ಅಕ್ಷಯ್ ಕುಮಾರ್
ಸಿನಿಮಾ ಬಗ್ಗೆ ಹೇಳೋದಾದರೆ, ಸೆಪ್ಟೆಂಬರ್ 19ರಂದು ‘ಜಾಲಿ ಎಲ್ಎಲ್ಬಿ 3’ ಬಿಡುಗಡೆ ಆಗಲಿದೆ. ಅಕ್ಷಯ್ ಕುಮಾರ್ ಜೊತೆ ಅರ್ಷದ್ ವಾರ್ಸಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸೌರಭ್ ಶುಕ್ಲಾ, ಹುಮಾ ಖುರೇಶಿ ಮುಂತಾದವರು ಸಹ ಪಾತ್ರವರ್ಗದಲ್ಲಿ ಇದ್ದಾರೆ. ಈಗಾಗಲೇ ಟ್ರೇಲರ್ ಗಮನ ಸೆಳೆದಿದೆ. ಕೋರ್ಟ್ ರೂಮ್ ಡ್ರಾಮಾ ಈ ಸಿನಿಮಾದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.