
ಯಶ್ ರಾಜ್ ಫಿಲಮ್ಸ್ (ವೈಆರ್ಎಫ್) 65 ವರ್ಷಗಳಿಂದಲೂ ಸಿನಿಮಾ ನಿರ್ಮಾಣ ಮಾಡಿಕೊಂಡು ಬಂದಿರುವ ಜನಪ್ರಿಯ ನಿರ್ಮಾಣ ಸಂಸ್ಥೆ. 1960 ರಲ್ಲಿ ಯಶ್ ರಾಜ್ ಅವರು ಸ್ಥಾಪಿಸಿದ ಈ ಸಂಸ್ಥೆ ಇಂದಿಗೂ ಸಹ ಬಾಲಿವುಡ್ನ ಅತ್ಯಂತ ಯಶಸ್ವಿ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಹಲವು ಅತ್ಯುತ್ತಮ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡಿರುವ ಯಶ್ ರಾಜ್ ಫಿಲಮ್ಸ್, ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಸ್ಪೈ ಸಿನಿಮಾಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ‘ಟೈಗರ್’, ‘ವಾರ್’, ‘ಧೂಮ್’, ‘ಪಠಾಣ್’ ಇನ್ನೂ ಕೆಲ ಸ್ಪೈ ಥ್ರಿಲ್ಲರ್ ಸಿನಿಮಾಗಳ ನಿರ್ಮಿಸಿದೆ. ಇದೀಗ ಈ ಸರಣಿಗೆ ಹೊಸ ಸ್ಪೈ ಥ್ರಿಲ್ಲರ್ ಸಿನಿಮಾ ಸೇರ್ಪಡೆಗೆ ಯಶ್ ರಾಜ್ ಫಿಲಮ್ಸ್ ಮುಂದಾಗಿದೆ.
ಯಶ್ ರಾಜ್ ಫಿಲಮ್ಸ್ ಅವರ ಯಶಸ್ವಿ ಸ್ಪೈ ಆಕ್ಷನ್ ಥ್ರಿಲ್ಲರ್ ಆಗಿರುವ ‘ವಾರ್’ ಸಿನಿಮಾದ ಎರಡನೇ ಸಿನಿಮಾ ‘ವಾರ್ 2’ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಬಿಡುಗಡೆ ಆಗಿ ಎರಡು ವಾರವಾದರೂ ಸಿನಿಮಾದ ಕಲೆಕ್ಷನ್ 300 ಕೋಟಿ ದಾಟಿಲ್ಲ. ಆಂಧ್ರ-ತೆಲಂಗಾಣ ರಾಜ್ಯಗಳಲ್ಲಿಯೂ ಸಹ ಸಿನಿಮಾ ಸೋಲು ಕಂಡಿದೆ. ಆದರೆ ಯಶ್ ರಾಜ್ ಫಿಲಮ್ಸ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.
ಇದನ್ನೂ ಓದಿ:‘ವಾರ್ 2’ ನಷ್ಟ, ವಿತರಕನಿಗೆ ನಷ್ಟ ತುಂಬಿಕೊಟ್ಟ ಯಶ್ ರಾಜ್ ಫಿಲಮ್ಸ್
‘ವಾರ್ 2’ ನಿರೀಕ್ಷಿತ ಪ್ರದರ್ಶನ ಕಾಣದಿದ್ದರೂ ಸಹ ಸಿನಿಮಾದ ಇಬ್ಬರು ನಾಯಕರಲ್ಲಿ ಒಬ್ಬರಾದ ಜೂ ಎನ್ಟಿಆರ್ ಅವರಿಗೆ ಯಶ್ ರಾಜ್ ಫಿಲಮ್ಸ್ ಮತ್ತೊಂದು ಅವಕಾಶ ನೀಡಿದೆ. ಸ್ಟಾಂಡ್ ಅಲೋನ್ ಸ್ಪೈ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸಲು ಆಹ್ವಾನಿಸಲಾಗಿದೆ. ‘ವಾರ್ 2’ ಸಿನಿಮಾನಲ್ಲಿ ಮೇಜರ್ ವಿಕ್ರಮ್ ಅಲಿಯಾಸ್ ರಘು ಪಾತ್ರದಲ್ಲಿ ಜೂ ಎನ್ಟಿಆರ್ ನಟಿಸಿದ್ದಾರೆ. ಇದೀಗ ವೈಆರ್ಎಫ್ ಮೇಜರ್ ವಿಕ್ರಮ್ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲು ಮುಂದಾಗಿದ್ದು, ಇದು ಜೂ ಎನ್ಟಿಆರ್ ಅವರ ಸೋಲೊ ಸಿನಿಮಾ ಆಗಿರಲಿದೆ.
ಜೂ ಎನ್ಟಿಆರ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿದೆ. ಆ ಸಿನಿಮಾದ ಬಳಿಕ ಕೊರಟಾಲ ಶಿವ ನಿರ್ದೇಶನದ ‘ದೇವರ 2’ ಸಿನಿಮಾದ ಚಿತ್ರೀಕರಣ ಆರಂಭ ಆಗಬೇಕಿದೆ. ಈ ಎರಡೂ ಸಿನಿಮಾಗಳ ಬಳಿಕವಷ್ಟೆ ಜೂ ಎನ್ಟಿಆರ್ ಅವರ ಹಿಂದಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ