‘ವಾರ್ 2’ ನಷ್ಟ, ವಿತರಕನಿಗೆ ನಷ್ಟ ತುಂಬಿಕೊಟ್ಟ ಯಶ್ ರಾಜ್ ಫಿಲಮ್ಸ್
War 2 movie collections: ಹೃತಿಕ್ ರೋಷನ್-ಜೂ ಎನ್ಟಿಆರ್ ಒಟ್ಟಿಗೆ ನಟಿಸಿರುವ ‘ವಾರ್ 2’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಹೀನಾಯ ಸೋಲು ಕಂಡಿದೆ. ಸಿನಿಮಾ ಸೋಲಿನಿಂದ ನಷ್ಟ ಅನುಭವಿಸಿದ ವಿತರಕ ನಾಗವಂಶಿಗೆ ನಷ್ಟ ತುಂಬಿಕೊಟ್ಟಿದೆ ವೈಆರ್ಎಫ್.

ಹತ್ತು ದಿನದ ಹಿಂದೆ ಬಿಡುಗಡೆ ಆಗಿದ್ದ ಭಾರಿ ನಿರೀಕ್ಷಿತ ಸಿನಿಮಾ ‘ವಾರ್ 2’ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿದೆ. ಸಿನಿಮಾನಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಾಗಿ ನಟಿಸಿದ್ದರು. ಹಾಗಾಗಿ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ ಸಿನಿಮಾ ಸೋಲು ಕಂಡಿದೆ. ಅದರಲ್ಲೂ ತೆಲುಗು ರಾಜ್ಯಗಳಲ್ಲಿಯೂ ಸಹ ಜೂ ಎನ್ಟಿಆರ್ ಮ್ಯಾಜಿಕ್ ನಡೆದಿಲ್ಲ. ಜೂ ಎನ್ಟಿಆರ್ ಇದ್ದಾರೆಂಬ ಕಾರಣಕ್ಕೆ ಭಾರಿ ಮೊತ್ತ ಹೂಡಿ ಬಿಡುಗಡೆ ಹಕ್ಕು ಖರೀದಿಸಿದ್ದ ಖ್ಯಾತ ನಿರ್ಮಾಪಕ ಕಮ್ ವಿತರಕ ನಾಗವಂಶಿ ಭಾರಿ ನಷ್ಟ ಅನುಭವಿಸಿದ್ದಾರೆ. ಆದರೆ ಯಶ್ ರಾಜ್ ಫಿಲಮ್ಸ್ ಇದೀಗ ಹಣವನ್ನು ಮರಳಿ ನೀಡುತ್ತಿದೆ.
ಜೂ ಎನ್ಟಿಆರ್ ಅವರಿಗೆ ಬಲು ಆಪ್ತರೂ ಆಗಿರುವ ನಿರ್ಮಾಪಕ ಮತ್ತು ವಿತರಕ ನಾಗವಂಶಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ‘ವಾರ್ 2’ ಸಿನಿಮಾದ ಬಿಡುಗಡೆ ಹಕ್ಕು ಖರೀದಿ ಮಾಡಿದ್ದರು. ಭಾರಿ ಹಣ ತೆತ್ತು ಹೈದರಾಬಾದ್ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನೂ ಸಹ ಮಾಡಿದ್ದರು. ಪ್ರಚಾರಕ್ಕಾಗಿ ಭಾರಿ ದೊಡ್ಡ ಮೊತ್ತವನ್ನೂ ಸಹ ಖರ್ಚು ಮಾಡಿದ್ದರು. ಆದರೆ ಖರ್ಚು ಮಾಡಿದ್ದೆಲ್ಲ ನೀರಿನಲ್ಲಿ ಹೋಮವಾಗಿದೆ.
ಬರೋಬ್ಬರಿ 80 ಕೋಟಿ ರೂಪಾಯಿ ಹಣ ನೀಡಿ ಆಂಧ್ರ ಮತ್ತು ತೆಲಂಗಾಣದ ಸಿನಿಮಾ ಬಿಡುಗಡೆ ಹಕ್ಕನ್ನು ನಾಗವಂಶಿ ಖರೀದಿ ಮಾಡಿದ್ದರು. ಪ್ರಚಾರಕ್ಕಾಗಿ ಹಾಗೂ ಚಿತ್ರಮಂದಿರಗಳ ಅಡ್ವಾನ್ಸ್ಗಾಗಿ ಕೆಲ ಕೋಟಿಗಳನ್ನು ಖರ್ಚು ಸಹ ಮಾಡಿದ್ದರು. ಈ ಸಿನಿಮಾ ಆಂಧ್ರ-ತೆಲಂಗಾಣಗಳಲ್ಲಿ ಸುಮಾರು 100 ಕೋಟಿ ಗಳಿಕೆ ಮಾಡಲಿದೆ ಎಂಬುದು ನಾಗವಂಶಿ ಲೆಕ್ಕಾಚಾರ ಆಗಿತ್ತು. ಆದರೆ ಅದು ಸಂಪೂರ್ಣ ಉಲ್ಟಾ ಆಗಿದೆ.
ಇದನ್ನೂ ಓದಿ:ವಿತರಕರಿಗೆ 22 ಕೋಟಿ ರೂ. ನಷ್ಟ ತುಂಬಿಕೊಡಲಿರುವ ‘ವಾರ್ 2’ ನಿರ್ಮಾಪಕರು?
ಕಳೆದ ಹತ್ತು ದಿನದಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ಸೇರಿ ಈ ಸಿನಿಮಾ 52 ಕೋಟಿ ರೂಪಾಯಿ ಮಾತ್ರವೇ ಗಳಿಕೆ ಮಾಡಿದೆ. ಇದರಿಂದಾಗಿ ನಾಗವಂಶಿಗೆ ಭಾರಿ ನಷ್ಟವಾಗಿದೆ. 100 ಕೋಟಿಯ ನಿರೀಕ್ಷೆಯಲ್ಲಿದ್ದ ನಾಗವಂಶಿಗೆ ಅರ್ಧದಷ್ಟು ಹಣವಷ್ಟೆ ಬಂದಿದೆ. ಹಾಕಿರುವ ಬಂಡವಾಳವೂ ಸಹ ಮರಳಿ ಬಂದಿಲ್ಲ. ಆದರೆ ಇದೀಗ ಜೂ ಎನ್ಟಿಆರ್ ಮನವಿ ಮೇರೆಗೆ ‘ವಾರ್ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ವೈಆರ್ಎಫ್, ನಾಗವಂಶಿ ಅವರಿಗೆ 22 ಕೋಟಿ ರೂಪಾಯಿ ಹಣವನ್ನು ವಾಪಸ್ ನೀಡಲು ಮುಂದಾಗಿದೆ.
‘ವಾರ್ 2’ ಬಿಡುಗಡೆ ಆಗಿ ಹತ್ತು ದಿನಗಳ ಬಳಿಕ ಈಗ ದಿನವಹಿ ಸಿನಿಮಾ ಕಲೆಕ್ಷನ್ ಕೋಟಿಗೂ ಕಡಿಮೆ ಮೊತ್ತಕ್ಕೆ ಬಂದಿದ್ದು ಇನ್ನೊಂದು ವಾರವಷ್ಟೆ ಸಿನಿಮಾ ಚಿತ್ರಮಂದಿರಗಳಲ್ಲಿ ಉಳಿಯಲಿದೆ. ಅದಾದ ಬಳಿಕ ಎತ್ತಂಗಡಿ ಆಗಲಿದೆ. ಹೀಗಾಗಿ ವೈಆರ್ಎಫ್ ಮಾನವೀಯತೆ ಆಧಾರದಲ್ಲಿ ನಾಗವಂಶಿಗೆ 22 ಕೋಟಿ ಹಣ ಮರಳಿಸಿದ್ದು, ನಷ್ಟವನ್ನು ತುಸು ಕಡಿಮೆ ಮಾಡಿದೆ.
ನಾಗವಂಶಿಗೆ ಸತತ ಸೋಲುಗಳು ಇತ್ತೀಚೆಗೆ ಎದುರಾಗುತ್ತಿವೆ. ನಾಗವಂಶಿ ಬಂಡವಾಳ ಹೂಡಿ ವಿಜಯ್ ದೇವರಕೊಂಡ ನಟಿಸಿದ್ದ ‘ಕಿಂಗ್ಡಮ್’ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿತು. ಅದಕ್ಕೆ ಹಿಂದೆ ಬಿಡುಗಡೆ ಆದ ‘ಮ್ಯಾಡ್ ಸ್ಕೇರ್’ ಸಿನಿಮಾ ಸಹ ಹೀನಾಯ ಸೋಲು ಕಂಡಿತು. ಈಗ ‘ವಾರ್ 2’ ಸಹ ಕೈಕೊಟ್ಟಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




