ಅಮಿತಾಭ್ ಬಚ್ಚನ್ ಬಾಲಿವುಡ್ಗೆ ಕಾಲಿಟ್ಟು ಐದು ದಶಕಗಳ ಮೇಲಾಗಿದೆ. ಅವರ ಸಿನಿಮಾ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರ ನಟನೆಯ ‘ಕಾಲಾ ಪತ್ಥರ್’ ಸಿನಿಮಾ ತೆರೆಕಂಡು ಇಂದಿಗೆ (ಆಗಸ್ಟ್ 24) 42 ವರ್ಷಗಳಾಗಿದೆ. ಈ ನೆನಪನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
1979ರಲ್ಲಿ ‘ಕಾಲಾ ಪತ್ಥರ್’ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಅಮಿತಾಭ್ ನಿವೃತ್ತ ನೌಕಾ ಪಡೆಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಹಳೆಯದ್ದನ್ನು ಮರೆಯಲು ಗಣಿಯಲ್ಲಿ ಅವರು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಈ ಪಾತ್ರ ಅಮಿತಾಭ್ಗೆ ಹೆಚ್ಚು ಕನೆಕ್ಟ್ ಆಗಿತ್ತು. ಇದಕ್ಕೆ ಕಾರಣವೂ ಇದೆ.
1962ರಲ್ಲಿ ಕೋಲ್ಕತ್ತಾದಲ್ಲಿ ಕಲ್ಲುಗಣಿಯಲ್ಲಿ ಕೆಲಸ ಮಾಡಿದ್ದರು ಅಮಿತಾಭ್. 7-8 ವರ್ಷಗಳ ಕಾಲ ಅವರು ಅಲ್ಲಿಯೇ ಶ್ರಮಿಸಿದ್ದರು. ಅನೇಕ ಸಂದರ್ಶನದಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅವರಿಗೆ ‘ಕಾಲಾ ಪತ್ಥರ್’ ಪಾತ್ರ ಹೆಚ್ಚು ಆಪ್ತವಾಗಿದೆ
‘ಸಿನಿಮಾದಲ್ಲಿನ ಸಾಕಷ್ಟು ಘಟನೆಗಳು ನನ್ನ ಜೀವನಕ್ಕೆ ಕನೆಕ್ಟ್ ಆಗಿದೆ. ನಾನು ಕೋಲ್ಕತ್ತಾ ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಸಿನಿಮಾಗೆ ಸೇರುವುದಕ್ಕೂ ಮೊದಲು ಧನ್ಬಾದ್ ಹಾಗೂ ಅಸನ್ಸೋಲ್ಗಣಿಯಲ್ಲಿ ನಾನು ದುಡಿಯುತ್ತಿದ್ದೆ’ ಎಂದು ಟ್ವೀಟ್ ಮಾಡಿದ್ದಾರೆ ಅಮಿತಾಭ್.
ಈ ಸಿನಿಮಾದಲ್ಲಿ ಶಶಿ ಕಪೂರ್, ಶತ್ರುಘ್ನ ಸಿನ್ಹಾ, ಸಂಜೀವ್ ಕುಮಾರ್, ನೀತು ಸಿಂಗ್, ಪ್ರೇಮ್ ಚೋಪ್ರಾ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಯಶ್ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಸಲೀಮ್ ಜಾವೇದ್ ಅವರು ಚಿತ್ರಕಥೆ ಬರೆದಿದ್ದಾರೆ. ಹಿಂದಿ ಸಿನಿಮಾ ಚಿತ್ರರಂಗದಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅಮಿತಾಭ್ ವೃತ್ತಿ ಜೀವನದಲ್ಲಿ ಈ ಸಿನಿಮಾ ಪ್ರಮುಖ ಎನಿಸಿಕೊಂಡಿದೆ.
ಅಮಿತಾಭ್ ಅವರು 1969ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಸಾತ್ ಹಿಂದೂಸ್ತಾನಿ’ ಅವರ ಮೊದಲ ಸಿನಿಮಾ. ಕಳೆದ ವರ್ಷ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಗಣಿಯಲ್ಲಿ ಕೆಲಸ ಮಾಡಿದ ವಿಚಾರವನ್ನು ನೆನಪಿಸಿಕೊಂಡಿದ್ದಾರೆ ಅಮಿತಾಭ್.
ಅಮಿತಾಭ್ ಸದ್ಯ, ಕೌನ್ ಬನೇಗಾ ಕರೋಡ್ಪತಿ 13ನೇ ಸೀಸನ್ ಹೋಸ್ಟ್ ಮಾಡುತ್ತಿದ್ದಾರೆ. ಇದರ ಜತೆಗೆ ‘ಗುಡ್ಬೈ’ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಗುಡ್ಬೈ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ.
ಇದನ್ನೂ ಓದಿ: Amitabh Bachchan: ಭಾರತದ ಮೊದಲ ಸೆಲೆಬ್ರಿಟಿ: ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ವಾಯ್ಸ್‌ನಲ್ಲಿ ಅಲೆಕ್ಸಾ!