ಹೀನಾಯವಾಗಿ ಸೋತ ತಮ್ಮ ಚಿತ್ರವನ್ನು ಸೂಪರ್ ಹಿಟ್ ಎಂದು ಘೋಷಿಸಿಕೊಂಡ ನಟಿ ಕಂಗನಾ ರಣಾವತ್

|

Updated on: Jul 01, 2023 | 8:39 AM

Kangana Ranaut Movie: ಕಂಗನಾ ತಾವೇ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಅಡಿಯಲ್ಲಿ ರಿಲೀಸ್ ಆದ ಮೊದಲ ಸಿನಿಮಾ ‘ಟೀಕು ವೆಡ್ಸ್ ಶೇರು’ ವಿಮರ್ಶೆಯಲ್ಲಿ ಸೋತಿದೆ.

ಹೀನಾಯವಾಗಿ ಸೋತ ತಮ್ಮ ಚಿತ್ರವನ್ನು ಸೂಪರ್ ಹಿಟ್ ಎಂದು ಘೋಷಿಸಿಕೊಂಡ ನಟಿ ಕಂಗನಾ ರಣಾವತ್
ಕಂಗನಾ- ಟೀಕು ವೆಡ್ಸ್ ಶೇರು
Follow us on

ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ಇತ್ತೀಚೆಗೆ ಸಾಲು ಸಾಲು ಸೋಲು ಉಂಟಾಗುತ್ತಿದೆ. ಇಷ್ಟು ವರ್ಷ ನಟನೆಯಲ್ಲಿ ಮಾತ್ರ ಸೋಲುತ್ತಿದ್ದರು. ಈಗ ನಿರ್ಮಾಣ ಸಂಸ್ಥೆ ಆರಂಭಿಸಿ ಅದರಲ್ಲೂ ಕೈಸುಟ್ಟುಕೊಂಡಿದ್ದಾರೆ. ಸೋತ ಚಿತ್ರವನ್ನು ಸೂಪರ್ ಹಿಟ್ ಸಿನಿಮಾ ಎಂದು ಕರೆದಿದ್ದಾರೆ. ಆ ಚಿತ್ರ ಬೇರಾವುದೂ ಅಲ್ಲ, ‘ಟೀಕು ವೆಡ್ಸ್ ಶೇರು’ ಸಿನಿಮಾ. ತಮ್ಮ ನಿರ್ಮಾಣ ಸಂಸ್ಥೆ ‘ಮಣಿಕರ್ಣಿಕಾ ಫಿಲ್ಮ್ಸ್​’ ಮೂಲಕ ಇದನ್ನು ಕಂಗನಾ ನಿರ್ಮಾಣ ಮಾಡಿದ್ದರು. ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದ ಹೊರತಾಗಿಯೂ ಜನರು ಇದನ್ನು ವೀಕ್ಷಿಸುತ್ತಿಲ್ಲ.

ಕಂಗನಾ ನಟನೆಯ ‘ಧಾಕಡ್’ ಸಿನಿಮಾ ಈ ಮೊದಲು ರಿಲೀಸ್ ಆಗಿತ್ತು. ಕಂಗನಾ ವೃತ್ತಿಬದುಕಿನಲ್ಲೇ ಈ ಚಿತ್ರ ಅತೀ ಹೀನಾಯ ಸಿನಿಮಾ ಎನಿಸಿಕೊಂಡಿತು. ಈ ಚಿತ್ರದಿಂದ ಕಂಗನಾ ದೊಡ್ಡ ಮಟ್ಟದ ಸೋಲು ಕಂಡರು. ಆದರೆ, ಕಂಗನಾ ಹೆದರಲಿಲ್ಲ, ಹಿಂದೆ ಸರಿಯಲಿಲ್ಲ. ತಾವೇ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದಕ್ಕೆ ಅವರು ‘ಮಣಿಕರ್ಣಿಕಾ ಫಿಲ್ಮ್ಸ್​’ ಎಂದು ಹೆಸರು ಇಟ್ಟಿದ್ದಾರೆ. ಇದರ ಅಡಿಯಲ್ಲಿ ರಿಲೀಸ್ ಆದ ಮೊದಲ ಸಿನಿಮಾ ‘ಟೀಕು ವೆಡ್ಸ್ ಶೇರು’ ವಿಮರ್ಶೆಯಲ್ಲಿ ಸೋತಿದೆ.

ನವಾಜುದ್ದೀನ್ ಸಿದ್ಧಿಕಿ ಹಾಗೂ ಅನ್ವೀತ್​ ಕೌರ್ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ತೆರೆಮೇಲೆ ನವಾಜುದ್ದೀನ್ ಅವರು ಅನ್ವೀತ್​ ಕೌರ್​ಗೆ ಕಿಸ್ ಮಾಡಿದ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ವಯಸ್ಸಿನ ಅಂತರದ ವಿಚಾರ ಇಟ್ಟುಕೊಂಡು ಅನೇಕರು ಈ ದೃಶ್ಯವನ್ನು ವಿರೋಧಿಸಿದ್ದರು. ‘ಟೀಕು ವೆಡ್ಸ್ ಶೇರು’ ಚಿತ್ರದಲ್ಲಿ ಏನಾದರೂ ಸತ್ವ ಇರಬಹುದು ಎಂದು ಸಿನಿಮಾ ನೋಡಿದವರಿಗೆ ನಿರಾಸೆ ಉಂಟಾಗಿದೆ. ಐಎಂಡಿಬಿಯಲ್ಲಿ ಈ ಚಿತ್ರ 10ಕ್ಕೆ ಕೇವಲ 3.8 ರೇಟಿಂಗ್ ಪಡೆದುಕೊಂಡಿದೆ. ಈ ಚಿತ್ರವನ್ನು ಎಲ್ಲರೂ ತೆಗಳುತ್ತಿದ್ದಾರೆ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿನಂತೆ ಕಂಗನಾ ಈ ಚಿತ್ರವನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ: ‘ಕಂಗನಾ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ, ಅವರಿಗೆ ನಾನು ಬೆಲೆ ಕೊಡಲ್ಲ’: ಸಿಟ್ಟಾದ ಆಲಿಯಾ ಸಿದ್ಧಿಕಿ

ಹೊಸಫೋಟೋಶೂಟ್ ಮಾಡಿಸಿ ಇನ್​ಸ್ಟಾಗ್ರಾಮ್​ನಲ್ಲಿ ಅದನ್ನು ಕಂಗನಾ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಕ್ಯಾಪ್ಶನ್ ನೀಡಿದ್ದಾರೆ.  ‘ಮೊದಲ ನಿರ್ಮಾಣದ ಸಿನಿಮಾ ಸೂಪರ್ ಹಿಟ್ ಆಗಿದ್ದಕ್ಕೆ ಗ್ರ್ಯಾಂಡ್ ಪಾರ್ಟಿ ಮಾಡಬೇಕು’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಈ ಮೂಲಕ ‘ಟೀಕು ವೆಡ್ಸ್ ಶೇರು’ ಸೂಪರ್ ಹಿಟ್ ಎಂದು ಅವರೇ ಘೋಷಿಸಿಕೊಂಡಿದ್ದಾರೆ. ಇದಕ್ಕೆ ವಿವಿಧ ರೀತಿಯ ಕಮೆಂಟ್​ಗಳು ಬಂದಿವೆ. ‘ಈ ಚಿತ್ರ ತುಂಬಾನೇ ಕೆಟ್ಟದಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಈ ರೀತಿಯ ಸ್ವಯಂಘೋಷಣೆ ನಿಲ್ಲಿಸಿ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:29 am, Sat, 1 July 23