Aaliya Siddiqui: ‘ಕಂಗನಾ ಎಲ್ಲದರಲ್ಲೂ ಮೂಗು ತೂರಿಸುತ್ತಾರೆ, ಅವರಿಗೆ ನಾನು ಬೆಲೆ ಕೊಡಲ್ಲ’: ಸಿಟ್ಟಾದ ಆಲಿಯಾ ಸಿದ್ಧಿಕಿ
Kangana Ranaut: ಆಲಿಯಾ ಸಿದ್ಧಿಕಿ ಮತ್ತು ನವಾಜುದ್ಧೀನ್ ಸಿದ್ಧಿಕಿ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ನವಾಜುದ್ದೀನ್ ಪರ ಮಾತನಾಡಿದ್ದ ಕಂಗನಾ ರಣಾವತ್ಗೆ ಆಲಿಯಾ ತಿರುಗೇಟು ನೀಡಿದ್ದಾರೆ.
ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರ ಪತ್ನಿ ಆಲಿಯಾ ಸಿದ್ಧಿಕಿ ಅವರು ಒಂದಾದ ಮೇಲೆ ಒಂದರಂತೆ ವಿವಾದ ಮಾಡಿಕೊಳ್ಳುತ್ತಿದ್ದಾರೆ. ಅವರು ಇತ್ತೀಚೆಗೆ ‘ಬಿಗ್ ಬಾಸ್ ಒಟಿಟಿ 2’ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದರು. ಆದರೆ, ಎರಡನೇ ವಾರವೇ ಅವರು ಮನೆಯಿಂದ ಹೊರ ಬಂದರು. ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಅವರೇ ಇದಕ್ಕೆಲ್ಲ ಕಾರಣ ಎಂದು ಆಲಿಯಾ ಸಿದ್ಧಿಕಿ (Aaliya Siddiqui) ಅವರು ಆರೋಪಿಸಿದ್ದಾರೆ. ಈಗ ಕಂಗನಾ ಬಗ್ಗೆಯೂ ಅವರು ಮಾತನಾಡಿದ್ದಾರೆ. ಕಂಗನಾ ರಣಾವತ್ (Kangana Ranaut) ಅವರು ಕಂಡ ಕಂಡ ವಿಚಾರದಲ್ಲಿ ಮೂಗು ತೂರಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಕಂಗನಾ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಂಗನಾ ರಣಾವತ್ ಅವರು ‘ಟೀಕು ವೆಡ್ಸ್ ಶೇರು’ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ನವಾಜುದ್ದೀನ್ ಸಿದ್ಧಿಕಿ ಹೀರೋ. ಅವನೀತ್ ಕೌರ್ ಈ ಚಿತ್ರದ ನಾಯಕಿ. ಇಬ್ಬರೂ ಲಿಪ್ ಲಾಕ್ ಮಾಡಿದ ದೃಶ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದಕ್ಕೆ ಟೀಕೆ ಬಂದಿತ್ತು. ಆದರೆ, ಕಂಗನಾ ಈ ಬಗ್ಗೆ ಮಾತನಾಡಲೇ ಇಲ್ಲ. ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಏಕೈಕ ಕಾರಣಕ್ಕೆ ನವಾಜುದ್ದೀನ್ ಪರ ಕಂಗನಾ ಅವರು ಮಾತನಾಡುತ್ತಿದ್ದಾರೆ ಎಂಬುದು ಆಲಿಯಾ ಆರೋಪ.
ನವಾಜುದ್ದೀನ್ ಬಗ್ಗೆ ಕಂಗನಾ ಏನು ಹೇಳಿದ್ದರು?
ನವಾಜುದ್ದೀನ್ ಸಿದ್ಧಿಕಿ ಅವರು ಪತ್ನಿ ಆಲಿಯಾರನ್ನು ಮನೆಯಲ್ಲಿ ಕೂಡಿಟ್ಟಿದ್ದರು ಎಂಬ ಆರೋಪ ಇದೆ. ನವಾಜುದ್ದೀನ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆ ಬಳಿಕ ಕಂಗನಾ ರಣಾವತ್ ಅವರು ನವಾಜುದ್ದೀನ್ ಪರ ಮಾತನಾಡಿದ್ದರು. ‘ಇದು ಬೇಕಿತ್ತು. ಮೌನ ಯಾವಾಗಲೂ ನಮಗೆ ಶಾಂತಿ ನೀಡುವುದಿಲ್ಲ. ನೀವು ಸ್ಪಷ್ಟನೆ ನೀಡಿದ್ದು ಖುಷಿ ನೀಡಿತು’ ಎಂದಿದ್ದರು ಕಂಗನಾ ರಣಾವತ್.
ಆಲಿಯಾ ಸಿದ್ಧಿಕಿ ಹೇಳಿದ್ದೇನು?
‘ನಾನು ಕಂಗನಾ ರಣಾವತ್ ಬಗ್ಗೆ ಗಮನ ಹರಿಸುವುದಿಲ್ಲ. ಅವರ ಮಾತಿಗೆ ಬೆಲೆ ಕೊಡುವುದಿಲ್ಲ. ಅವರು ಎಲ್ಲದಕ್ಕೂ ಮೂಗು ತೂರಿಸುತ್ತಾರೆ. ಎಲ್ಲರ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ನನ್ನ ಅಭಿಪ್ರಾಯದಲ್ಲಿ ಅವರ ಮಾತಿಗೆ ಯಾವುದೇ ಅರ್ಥವಿಲ್ಲ’ ಎಂದಿದ್ದಾರೆ ಆಲಿಯಾ ಸಿದ್ಧಿಕಿ.
ಇದನ್ನೂ ಓದಿ: Aaliya Siddiqui: ಹೊಸ ಬಾಯ್ಫ್ರೆಂಡ್ ಫೋಟೋ ಹಂಚಿಕೊಂಡ ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ
‘ನನ್ನ ಜೀವನದಲ್ಲಿ ಕಂಗನಾಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಕಂಗನಾಗೆ ನವಾಜುದ್ದೀನ್ ಪರ ಮಾತನಾಡಲೇಬೇಕಿತ್ತು. ಏಕೆಂದರೆ ಅವರು ನವಾಜುದ್ದೀನ್ ನಟನೆಯ ‘ಟೀಕು ವೆಡ್ಸ್ ಶೇರು’ ಚಿತ್ರದ ನಿರ್ಮಾಪಕಿ. ಅವರಿಗೆ ಸಿನಿಮಾ ಉಳಿಸಿಕೊಳ್ಳಲೇಬೇಕಿತ್ತು. ಬೇಡದ ವಿಚಾರದಲ್ಲಿ ಧ್ವನಿ ಎತ್ತಲು ಹೆಸರುವಾಸಿಯಾಗಿದ್ದಾರೆ’ ಎಂದು ಕಂಗನಾರನ್ನು ಆಲಿಯಾ ಸಿದ್ಧಿಕಿ ಟೀಕಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.