ಕಂಗನಾ ರಣಾವತ್ ಅವರು ‘ತಲೈವಿ’ ಚಿತ್ರಕ್ಕಾಗಿ ಬರೋಬ್ಬರಿ 20 ಕೆಜಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಅದು ಕೇವಲ ಆರು ತಿಂಗಳ ಅವಧಿಯಲ್ಲಿ. ನಂತರ ಮುಂದಿನ ಆರು ತಿಂಗಳ ಅವಧಿಯಲ್ಲಿ ಮತ್ತೆ ದೇಹದ ತೂಕ ಇಳಿಸಿಕೊಂಡಿದ್ದರು. ಇದರಿಂದ ಕಂಗನಾ ರಣಾವತ್ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧರಿಸಿ ಸಿದ್ಧಗೊಂಡಿರುವ ‘ತಲೈವಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿದೆ. ಇದಕ್ಕೆ ಕಾರಣಗಳು ಹಲವು. ಆದರೆ, ಕಂಗನಾ ರಣಾವತ್ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಮೇಕಿಂಗ್ ಬಗ್ಗೆಯೂ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಈ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ, ಇದರಿಂದ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
‘6 ತಿಂಗಳಲ್ಲಿ 20 ಕೆಜಿ ತೂಕ ಹೆಚ್ಚಿಸಿಕೊಂಡೆ ಮತ್ತೆ 6 ತಿಂಗಳಲ್ಲಿ ಮೊದಲಿನ ಸ್ಥಿತಿಗೆ ಬಂದೆ. ನನ್ನ ದೇಹದಲ್ಲಿ ಅನೇಕ ವಿಷಯಗಳನ್ನು ಇದು ಕೆಡಿಸಿದೆ. ನನ್ನ ದೇಹದ ಮೇಲೆ ಶಾಶ್ವತ ಸ್ಟ್ರೆಚ್ ಮಾರ್ಕ್ಗಳು ಮೂಡಿವೆ. ಆದರೆ, ಕಲಾವಿದೆಯಾಗಿ ನನಗೆ ಕಲೆ ಮುಖ್ಯ’ ಎಂದು ಅವರು ಬರೆದುಕೊಂಡಿದ್ದಾರೆ.
‘ತಲೈವಿ’ ಸಿನಿಮಾ ಸಂಪೂರ್ಣವಾಗಿ ಜಯಲಲಿತಾ ಜೀವನ ಕಥೆ ಆಧರಿಸಿ ಇದೆ. ಜಯಲಲಿತಾ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಅವರು ನಂತರ ಹೇಗೆ ರಾಜಕೀಯಕ್ಕೆ ಬಂದರು? ಹೇಗೆ ಸಿಎಂ ಆದರು? ಎನ್ನುವುದನ್ನು ಈ ಬಯೋಪಿಕ್ನಲ್ಲಿ ಹೇಳಲಾಗಿತ್ತು. ಜಯಲಲಿತಾ ಮುಖ್ಯಮಂತ್ರಿ ಆದ ನಂತರ ಸಿನಿಮಾ ಪೂರ್ಣಗೊಂಡಿತ್ತು. ಇದು ಅನೇಕರಿಗೆ ಬೇಸರ ತರಿಸಿತ್ತು. ‘ತಲೈವಿ’ ಸಿನಿಮಾದಲ್ಲಿ ಜಯಲಲಿತಾ ಬಣ್ಣದ ಬದುಕಿನ ಬಗ್ಗೆ ಹೆಚ್ಚು ತೋರಿಸಲಾಗಿದೆ. ರಾಜಕೀಯ ಬದುಕನ್ನು ಹೆಚ್ಚು ಹೈಲೈಟ್ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ನಿರ್ದೇಶಕರು ‘ತಲೈವಿ 2’ ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಇದಕ್ಕಾಗಿ ಕಂಗನಾ ಮತ್ತೆ ತೂಕ ಹೆಚ್ಚಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್ಫ್ಲಿಕ್ಸ್ನಲ್ಲಿ ಸಿಗುತ್ತಾ ಜಯ?